ಕ್ಷೇತ್ರ ಶಿಕ್ಷಣಾಧಿಕಾರಿ ಲಭ್ಯವಿಲ್ಲ ಎಂಬ ಸಾರ್ವಜನಿಕರ ಆರೋಪ
ದಾಂಡೇಲಿ (ಉತ್ತರ ಕನ್ನಡ): ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಜೋಯಡಾ, ವಿಸ್ತಾರದಲ್ಲಿ ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ತಾಲೂಕು ಕೇಂದ್ರವಾಗಿದೆ. ವಿರಳ ಜನಸಂಖ್ಯೆ, ದಟ್ಟ ಹಸಿರಿನ ಕಾಡು ಪ್ರದೇಶ, ಅಲ್ಲಲ್ಲಿ ಚದುರಿಕೊಂಡಿರುವ ಹಳ್ಳಿಗಳು ಹಾಗೂ ಶಾಲೆಗಳು ಈ ತಾಲೂಕಿನ ವಿಶೇಷತೆ. ಇಂತಹ ಭೌಗೋಳಿಕ ಸವಾಲುಗಳ ನಡುವೆ ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕಾದ ಜವಾಬ್ದಾರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಮೇಲಿದೆ.
ಆದರೆ, ಜೋಯಡಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಸೀರ ಅಹ್ಮದ್ ಶೇಖ ಅವರು ತಮ್ಮ ಕಚೇರಿಯಲ್ಲಿ ಲಭ್ಯರಿರುವುದಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಸೇವೆಗೆ ಗುಡ್‌ಬೈ
ದೂರದ ಗ್ರಾಮಗಳಿಂದ ಬಂದವರಿಗೆ ಉತ್ತರವೇ ಇಲ್ಲ?: ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸುವ ಅಹವಾಲುಗಳು, ದೂರದ ಗ್ರಾಮಗಳಿಂದ ಬರುವ ಶಿಕ್ಷಕರ ಸಮಸ್ಯೆಗಳು, ಆಡಳಿತಾತ್ಮಕ ತೀರ್ಮಾನಗಳ ಕುರಿತು ಮಾಹಿತಿ — ಇವುಗಳಿಗೆ ಉತ್ತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಿಗುವುದೇ ಇಲ್ಲ ಎಂದು ಆರೋಪಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಡ್‌ಕ್ವಾರ್ಟರ್ ಪಕ್ಕದ ದಾಂಡೇಲಿ ತಾಲೂಕು ಆಗಿದ್ದು, ಜೋಯಡಾ ಕಚೇರಿಯಲ್ಲಿ ಅವರು ವಿರಳವಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಮೊಬೈಲ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ ಎಂಬ ಅಸಮಾಧಾನ ಶಿಕ್ಷಕರಿಂದ ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ
ಯಾರಾದರೂ ಪ್ರಶ್ನಿಸಿದರೆ, “ನಾನು ಶಾಲಾ ವಿಸಿಟ್ ಮಾಡುತ್ತಿದ್ದೇನೆ” ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಜೋಯಡಾ ತಾಲೂಕು ಕೇಂದ್ರದಿಂದ 60–70 ಕಿಲೋಮೀಟರ್ ದೂರದಲ್ಲಿರುವ ಅನಮೋಡ, ಕ್ಯಾಸಲ್ ರಾಕ್ ಮೊದಲಾದ ಹಳ್ಳಿಗಳತ್ತ ತೆರಳಿದ್ದೇನೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂಬ ಆರೋಪವೂ ಇದೆ.
ಕಚೇರಿ ಇದ್ದರೂ ಅಧಿಕಾರಿಯಿಲ್ಲ?: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ಪ್ರಮುಖ ಅಂಗವಾಗಿದ್ದು, ಜೋಯಡಾ ತಾಲೂಕಿನ ಸಂಪೂರ್ಣ ಶಿಕ್ಷಣ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾದ ಕಚೇರಿ ಇದಾಗಿದೆ. ಆದರೆ, ಈ ಕಚೇರಿಯಲ್ಲಿ ಸಿಬ್ಬಂದಿಗಳು. ವ್ಯವಸ್ಥಾಪಕರು. ಸಾರ್ವಜನಿಕರು ಹಾಗೂ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರೊಂದಿಗೆ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮಾತ್ರ ತಮ್ಮದೇ ವ್ಯವಹಾರಗಳಲ್ಲಿ ನಿರತರಾಗಿದ್ದು, ಶಾಲಾ ವಿಸಿಟ್ ಹೆಸರಿನಲ್ಲಿ ಕಚೇರಿಗೆ ಬಾರದಿರುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ: Lokayan 2026: INS ಸುದರ್ಶಿನಿ 13 ದೇಶಗಳ 18 ಬಂದರುಗಳಿಗೆ ಭೇಟಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೊಠಡಿಯ ಬಾಗಿಲು ಸದಾ ಮುಚ್ಚಿರುತ್ತದೆ ಎಂಬುದು ಕೂಡ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
ಶಿಕ್ಷಕರ ಸಂಘದ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ: ಇದರ ಜೊತೆಗೆ, ಜೋಯಡಾ ತಾಲೂಕಿನ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶ್ವಂತ ನಾಯ್ಕ ಅವರ ಮೇಲೂ ಸಾಕಷ್ಟು ಸಾರ್ವಜನಿಕ ದೂರುಗಳಿವೆ. ಯಶ್ವಂತ ನಾಯ್ಕ ಅವರು ಸಂತ್ರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕರಾಗಿದ್ದಾರೆ,
ಜೋಯಡಾ, ಕುಂಬಾರವಾಡ, ಗಾಂಗೋಡಾ ಸೇರಿದಂತೆ ಹಲವು ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು. ಸಾರ್ವಜನಿಕರು ಒಟ್ಟು 12 ಆರೋಪಗಳ ಪಟ್ಟಿಯನ್ನು ಸಿದ್ಧಪಡಿಸಿ – ಜಿಲ್ಲಾ ಪಂಚಾಯತ್ ಹಾಗೂ ಡಿ.ಡಿ.ಪಿ.ಐ (DDPI) ಕಚೇರಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ
ತನಿಖೆಗೆ ಸೂಚನೆ ಇದ್ದರೂ ಕ್ರಮ ಶೂನ್ಯ: ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಅವರು, ಶಿರಸಿಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದು, ಶಿಕ್ಷಕ ಯಶ್ವಂತ ನಾಯ್ಕ ಅವರ ದುರ್ನಡತೆ, ಕರ್ತವ್ಯ ಲೋಪ ವಿಷಯದಲ್ಲಿ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ದೂರುದಾರರು ಪದೇಪದೇ ಜಿಲ್ಲಾ ಪಂಚಾಯತಿಗೆ ಪತ್ರ ವ್ಯವಹಾರ ಮಾಡುತ್ತಿರುವುದರಿಂದ, “ಇನ್ನೂ ವಿಳಂಬಕ್ಕೆ ಆಸ್ಪದ ನೀಡದೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಆದರೆ, ಈವರೆಗೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಧ್ಯಮಕ್ಕೂ ಮಾಹಿತಿ ಸಿಗುತ್ತಿಲ್ಲ: ಈ ಎಲ್ಲ ಆರೋಪಗಳ ಕುರಿತು ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಬಸೀರ ಅಹ್ಮದ್ ಶೇಖ ಅವರು ಕಚೇರಿಯಲ್ಲಿ ಲಭ್ಯವಿಲ್ಲ ಮಾಧ್ಯಮದವರ ಕರೆಗಳಿಗೂ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಕಚೇರಿಗೆ ಬರದೇ ಇದ್ದರೆ, ಯಾರ ಬಳಿ ಉತ್ತರ ಕೇಳಬೇಕು? ಎಂಬ ಪ್ರಶ್ನೆ ಜೋಯಡಾ ತಾಲೂಕಿನ ಸಾರ್ವಜನಿಕರಲ್ಲಿ ಮೂಡಿದೆ.
ಇದನ್ನೂ ಓದಿ: 3ನೇ ವರ್ಷವೂ ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲರು
ಶಿಕ್ಷಣ ಉಸ್ತುವಾರಿಗೆ ಪ್ರಶ್ನಾರ್ಥಕ: ಒಟ್ಟಾರೆ, ಹಿಂದುಳಿದ ಹಾಗೂ ಭೌಗೋಳಿಕವಾಗಿ ಸವಾಲಿನ ಪ್ರದೇಶವಾದ ಜೋಯಡಾ ತಾಲೂಕಿನ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳು ಮತ್ತು ಸಂಘಟನೆಗಳ ಮೇಲೆಯೇ ಗಂಭೀರ ಪ್ರಶ್ನೆಗಳು ಎದ್ದಿವೆ.
ಶಾಲಾ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ, ಜವಾಬ್ದಾರಿತನದ ಆಡಳಿತ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.























