ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಸುತ್ತಮುತ್ತಲಿನ ಪ್ರದೇಶ ಪರಿಸರ ಪ್ರವಾಸೋದ್ಯಮ ಮತ್ತು ಜಲಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣದಂತಿದೆ. ಮಳೆಗಾಲದ ನಂತರ ಜಲಕ್ರೀಡೆಗಳಾದ ರಾಫ್ಟಿಂಗ್, ಬೋಟಿಂಗ್, ಕಯಾಕಿಂಗ್, ಜೋರ್ಬಿಂಗ್,ಝೀಪ್ಲೈನ್ ಮತ್ತಿತರೇ ಕ್ರೀಡೆಗಳು ಗಣೇಶ ಗುಡಿಯ ಇಳವಾ, ಬಾಡಗುಂದ, ಮಾವಳಂಗಿಯ ಕಾಳಿ ನದಿಯ ದಂಡೆಯಲ್ಲಿ ನಾಯಿಕೊಡೆಯಂತೆ ತಲೆ ಎತ್ತಿವೆ.
ಇವುಗಳಲ್ಲಿ ಯಾವುದು ಅಧಿಕ್ರತ ಮತ್ತು ಅನಧಿಕೃತ ಎಂಬುದು ಪ್ರವಾಸೋದ್ಯಮ ಇಲಾಖೆಯೇ ಸ್ಪಷ್ಟಪಡಿಸಬೇಕಿದೆ. ಇಲ್ಲಿ ನಿಯಮಗಳ ಪಾಲನೆ ಸರಿಯಾಗುತ್ತಿಲ್ಲ ಎನ್ನುವ ದೂರುಗಳಿವೆ. ಒಂದು ಜಟ್ಟಿಯಲ್ಲಿ 4-5 ರಾಫ್ಟ್ ಬೋಟ್‌ಗಳಿಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಲೈಸೆನ್ಸ್ ನೀಡಿದರೆ ಇಲ್ಲಿ ಲೈಸೆನ್ಸ ಇಲ್ಲದೇ ಹತ್ತು, ಹನ್ನೆರಡು ರಾಫ್ಟ್‌ಗಳು,ಇದರಲ್ಲಿ ಐದಾರು ರಾಫ್ಟ್ ಬೋಟುಗಳು ಲೈಸೆನ್ಸ್, ವಿಮಾ ಪತ್ರ ಮತ್ತು ಚಾಲನಾ ಪ್ರಮಾಣ ಪತ್ರ (ಸಾರಂಗ ಲೈಸೆನ್ಸ್ ಇಲ್ಲದೇ ರಾಫ್ಟಿಂಗ್,ಬೋಟಿಂಗ್ ಚಟುವಟಿಕೆಯಲ್ಲಿ ನಿರತವಾಗಿರುತ್ತದೆ.
ಇಂತಹ ರಾಫ್ಟ್ ಬೋಟುಗಳಲ್ಲಿ ಪ್ರಯಾಣಿಸುವ ಪ್ರವಾಸಿಗರು ಅಪಾಯಕ್ಕೆ ಸಿಲುಕಿದಲ್ಲಿ ಯಾವುದೇ ಪರಿಹಾರ ನೀಡಲು ಬರುವುದಿಲ್ಲ. ಕಾರಣ ಲೈಸೆನ್ಸ ಹೊಂದಿದ ರಾಫ್ಟ್, ಮತ್ತು ಸಾರಂಗ ಲೈಸೆನ್ಸ ಹೊಂದಿದವರು ಮಾತ್ರ ನಿಯಮಾವಳಿಯನ್ನು ಪಾಲಿಸಿ ರಾಫ್ಟಿಂಗ್, ಬೋಟಿಂಗ್ ನಡೆಸುವಂತೆ ಸತತ ಪರಿಶೀಲನೆ ನಡೆಸಬೇಕಾದ ಅಗತ್ಯ ಪೋರ್ಟ್ ಇನ್ಸ್ಪೆಕ್ಟರ್, ಜಿಲ್ಲಾ ಪ್ರವಾಸೋದ್ಯಮ. ಅಭಿವೃದ್ಧಿ ಸಮಿತಿಯ ಜವಾಬ್ದಾರಿಯಾಗಿದೆ.
ಪ್ರವಾಸಿಗರ ಸುರಕ್ಷತೆಯೇ ಇಲ್ಲಿ ಮುಖ್ಯವಾಗಿದ್ದು, ಪ್ರವಾಸಿಗರ ಜೀವದೊಂದಿಗೆ ಚೆಲ್ಲಾಟ ವಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ದಸರಾ ಮುಗಿದು ದೀಪಾವಳಿ ಹಬ್ಬದ ಈ ಸಮಯದಲ್ಲಿ ಪ್ರವಾಸಿಗರೇ ದಂಡೇ ದಾಂಡೇಲಿಗೆ ಬರುತ್ತಿದೆ. ಪ್ರವಾಸೋದ್ಯಮಿಗಳು ಅತಿಥಿಗಳ ಸೇವೆಗೈಯಲು ಸಿದ್ಧರಾಗಿದ್ದಾರೆ. ಜಲಕ್ರೀಡೆ ನಡೆಸುವವರು ಒಮ್ಮತದ ನಿರ್ಣಯಕ್ಕೆ ಬರದೆ ದರ ಪೈಪೋಟಿಗೆ ಬಿದ್ದಿದ್ದಾರೆ.
ಇದರಿಂದ ದುಡಿಯುವ ಕಾರ್ಮಿಕರು ಶ್ರಮ ಪಡುವಂತಾಗಿದೆ. ಜಲಕ್ರೀಡೆಗಳ ಅನುಷ್ಠಾನಕ್ಕಾಗಿ ಇರುವ ಜಟ್ಟಿ ಮಾಲೀಕರು ಪರಿಸರವನ್ನು ಗೌರವಿಸುವದು, ವನ್ಯಜೀವಿಗಳಿಗೆ, ಅಪಾರ ಸಂಖ್ಯೆಯಲ್ಲಿರುವ ಹಾರ್ನ್ ಬಿಲ್‌ಗಳಿಗೆ ಇನ್ನಿತರ ಪಕ್ಷಿಗಳಿಗೆ ತೊಂದರೆ ನೀಡದಿರುವದು, ಮಾಲಿನ್ಯವನ್ನು ತಡೆಗಟ್ಟುವದು, ಹಾಗೂ ನೈಸರ್ಗಿಕ ವಲಯಗಳಲ್ಲಿ ನಿರ್ದಿಷ್ಟ ನಿಯಮಗಳನ್ನು ಪಾಲಿಸುವದು ಮುಖ್ಯವಾಗಿದೆ.
ಜಲಕ್ರೀಡೆ ಆನಂದಿಸುವಾಗ ಪ್ರಕೃತಿ ಮತ್ತು ಪರಿಸರ ವ್ಯವಸ್ಥೆಯನ್ನು ಗೌರವಿಸುವದು ಅತ್ಯಗತ್ಯ. ಇದನ್ನು ಮನನ ಮಾಡಿಸುವಂತೆ ಕೆಲಸ ಪ್ರವಾಸೋದ್ಯಮಿಗಳು ಮಾಡಬೇಕಿದೆ.ದಾಂಡೇಲಿ ಪ್ರವಾಸೋದ್ಯಮದಲ್ಲಿ ಜಲಕ್ರೀಡೆಗಳಲ್ಲಿ ಪ್ರವಾಸಿಗರು ಈ ಹಿಂದೆ ಅಪಾಯದಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆಗಳು ನಡೆದಿರುವುದರಿಂದ ಸುರಕ್ಷತೆಗೆ ಆದ್ಯತೆ ನೀಡಿ ನಿಯಮದಂತೆ ರಕ್ಷಣಾ ಕ್ರಮ ಜರುಗಿಸಲು ಕೆಲ ಪರಿಸರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.