9 ಬಾರಿ ಶಾಸಕರಾದರೂ ದೊಡ್ಡ ಯೋಜನೆ ಏನು? ಬಿಜೆಪಿ ಸವಾಲು
ದಾಂಡೇಲಿ (ಉತ್ತರ ಕನ್ನಡ): ಹಳಿಯಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ದಾಂಡೇಲಿ ಬಿಜೆಪಿ ಮುಖಂಡರು, ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಾಜಿ ಶಾಸಕ ಸುನೀಲ ಹೆಗಡೆ ಅವರ ಅವಧಿಯ ಸಾಧನೆಗಳನ್ನು ಉಲ್ಲೇಖಿಸಿ, ಪ್ರಸ್ತುತ ಶಾಸಕ ಆರ್.ವಿ. ದೇಶಪಾಂಡೆ ಅವರ ವಿರುದ್ಧ ಪ್ರಶ್ನೆಗಳ ಮಳೆಗರೆದಿದ್ದಾರೆ.
ಒಂದು ಅವಧಿಯಲ್ಲಿ ಎರಡು ಪ್ರಮುಖ ಯೋಜನೆಗಳು: ಸುನೀಲ ಹೆಗಡೆ ಅವರು ಒಂದೇ ಬಾರಿ ಶಾಸಕರಾಗಿ ಆಯ್ಕೆಯಾದರೂ ಕ್ಷೇತ್ರಕ್ಕೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮತ್ತು ಕಾಳಿ ನದಿ ನೀರಾವರಿ ಯೋಜನೆಗೆ ಮಂಜೂರಾತಿ ತರಲು ಕಾರಣರಾದರು ಎಂಬುದನ್ನು ಮರೆಯುವಂತಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: 2.5 ಲಕ್ಷ ಖಾಲಿ ಹುದ್ದೆಗಳ ಭರ್ತಿ : ಸರ್ಕಾರ ಭರವಸೆ
9 ಬಾರಿ ಶಾಸಕರಾದ ದೇಶಪಾಂಡೆಗೆ ಪ್ರಶ್ನೆ: 9 ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿರುವ ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರಕ್ಕೆ ಹೊಸ ಕೈಗಾರಿಕೆಗಳನ್ನು ತಂದಿದ್ದಾರೆಯೇ? ಉದ್ಯೋಗ ಸೃಷ್ಟಿಗೆ ಯಾವುದೇ ದೊಡ್ಡ ಯೋಜನೆಗಳನ್ನು ಆರಂಭಿಸಿದ್ದಾರೆಯೇ? ಎಂದು ಪ್ರಶ್ನಿಸಲಾಗಿದೆ.
ಕಾಳಿ ನದಿ ನೀರಾವರಿ ಯೋಜನೆಗೆ ಮಂಜೂರಾತಿ ಸಿಕ್ಕು 16 ವರ್ಷಗಳಾದರೂ ಪೂರ್ಣಗೊಳ್ಳದಿರುವುದನ್ನು ಉಲ್ಲೇಖಿಸಿದ ಬಿಜೆಪಿ ಮುಖಂಡರು, “ರೈತರಿಗೆ ನೀರು ಬೇಕು. ಮಾತಲ್ಲ, ಕಾರ್ಯ ಬೇಕು. ಭರವಸೆ ಅಲ್ಲ, ಸಮಯಸೀಮೆ ಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ
ಜನಜಾಗೃತಿ – ಕೆಲಸದ ಲೆಕ್ಕ ಕೇಳುವ ಹಕ್ಕು : ಹಳಿಯಾಳ ಕ್ಷೇತ್ರದ ಜನರು ಜಾಗೃತರಾಗಿದ್ದು, 9 ಬಾರಿ ಶಾಸಕರಾಗಿ ಆಯ್ಕೆಯಾದ ಬಳಿಕವೂ ದೊಡ್ಡ ಜನಪರ ಯೋಜನೆಗಳನ್ನು ಪೂರ್ಣಗೊಳಿಸದಿದ್ದರೆ ಇನ್ನೆಷ್ಟು ದಿನ ರೈತರು ಕಾಯಬೇಕು ಎಂದು ಪ್ರಶ್ನಿಸಿದ್ದಾರೆ.
“ನಾವು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಆದರೆ ಕೆಲಸದ ಲೆಕ್ಕ ಕೇಳುವುದು ನಮ್ಮ ಹಕ್ಕು” ಎಂದು ಬಿಜೆಪಿ ಮಂಡಳ ಅಧ್ಯಕ್ಷ ಬುದವಂತ ಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ ರೋಸೂರು, ಮಿಥುನ ನಾಯಕ, ಮುಖಂಡರಾದ ದಶರಥ ಬಂಡಿವಡ್ಡರ ಮತ್ತು ಪ್ರಶಾಂತ ಬಸೂರತೆಕರ ಹೇಳಿದ್ದಾರೆ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ನ್ಯಾಯಾಂಗ ಬಂಧನ
ರಾಜಕೀಯ ವಾಗ್ವಾದ ತೀವ್ರ: ಈ ಹೇಳಿಕೆಯಿಂದ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ರಾಜಕೀಯ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಕ್ಷೇತ್ರದ ಅಭಿವೃದ್ಧಿ, ಕೈಗಾರಿಕಾ ವಿಸ್ತರಣೆ ಮತ್ತು ನೀರಾವರಿ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟನೆಗಳ ನಿರೀಕ್ಷೆ ಇದೆ.























