ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನು ಚುಚ್ಚಿ ಗಾಯಗೊಂಡ ಯುವಕ ಸಾವನ್ನಪ್ಪಿದ ದಾರುಣ ಘಟನೆ ಕಾರವಾರ ತಾಲೂಕಿನ ಮಾಜಾಳಿ ದಾಂಡೇಭಾಗದಲ್ಲಿ ನಡೆದಿದೆ.
ಮೃತನನ್ನು ಅಕ್ಷಯ ಅನಿಲ ಮಾಜಾಳಿಕರ್ (24) ಎಂದು ಗುರುತಿಸಲಾಗಿದೆ. ಮಂಗಳವಾರ (ಅ.14) ಅಕ್ಷಯ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ದೋಣಿಯಲ್ಲಿ ಕುಳಿತಿದ್ದಾಗ ನೀರಿನಿಂದ ಜಿಗಿದ ಸುಮಾರು 8 ರಿಂದ 10 ಇಂಚು ಉದ್ದದ ಮೀನು ಅವನ ಹೊಟ್ಟೆಗೆ ಚುಚ್ಚಿದ್ದು, ಗಂಭೀರ ಗಾಯ ಉಂಟಾಗಿದೆ.
ಗಾಯಗೊಂಡ ಅಕ್ಷಯನನ್ನು ಕೂಡಲೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವನಿಗೆ ಗಾಯದ ಭಾಗಕ್ಕೆ ಹೊಲಿಗೆ ಹಾಕಿ ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ ನೋವು ಕಡಿಮೆಯಾಗದ ಕಾರಣ ಆಸ್ಪತ್ರೆಗೆ ಮರಳಿ ಉಳಿದಿದ್ದಾನೆ.
ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಅಕ್ಷಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದನು. ಮೀನಿನ ಮೂತಿ ಚುಚ್ಚಿದ ಪರಿಣಾಮ ಅವನ ಕರುಳಿಗೂ ಗಂಭೀರ ಗಾಯವಾಗಿದ್ದುದಾಗಿ ಶಂಕಿಸಲಾಗಿದೆ.
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದನೆಂಬ ಆಕ್ರೋಶವನ್ನು ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದಾರೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ಸಂಬಂಧಿಕರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.