ಹಳಿಯಾಳ ರಾಜಕೀಯ ಕದನ: ದೇಶಪಾಂಡೆ ಬೆಂಬಲಕ್ಕೆ ಮೋಹನ ಹಲವಾಯಿ
ದಾಂಡೇಲಿ (ಉತ್ತರ ಕನ್ನಡ): ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ವಿರುದ್ಧ ಮಾಜಿ ಶಾಸಕ ಸುನೀಲ ಹೆಗಡೆ ಮಾಡಿರುವ ಆರೋಪಗಳು ಸಂಪೂರ್ಣ ಬಾಲಿಶತನದ್ದಾಗಿವೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹಲವಾಯಿ, ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರದಿಂದ ಒಂಬತ್ತು ಬಾರಿ ಗೆದ್ದು ಶಾಸಕರಾಗಿ ಹಾಗೂ ಹಲವು ಖಾತೆಗಳ ಜನಪ್ರಿಯ ಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲೆಗೆ ಅನೇಕ ಪ್ರಮುಖ ಯೋಜನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ದೇಶಪಾಂಡೆ ಅವರ ಪಾತ್ರ ಪ್ರಮುಖವಾಗಿದೆ. ಇದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
“ಕಾಗೇರಿಯನ್ನು ಮೆಚ್ಚಿಸಲು ಹೇಳಿಕೆ” : ಸುನೀಲ ಹೆಗಡೆ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹಲವಾಯಿ ಆರೋಪಿಸಿದ್ದಾರೆ. ಕಾಗೇರಿ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಯ ವಿಭಜನೆಗೆ ಯತ್ನಿಸಿದ್ದು ಬಿಟ್ಟರೆ, ಜಿಲ್ಲೆಗೆ ಬೇರೆ ಯಾವ ಮಹತ್ವದ ಕೊಡುಗೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದ್ದಾರೆ.
“ರಾಜಕೀಯ ಪಾಠ ಮರೆಯಬೇಡಿ” : ದೇಶಪಾಂಡೆ ಅವರ ರಾಜಕೀಯ ಗರಡಿಯಲ್ಲಿ ಬೆಳೆದ ಸುನೀಲ ಹೆಗಡೆ ಹಾಗೂ ಅವರ ತಂದೆಯವರು ಎಂಎಲ್‌ಸಿ ಹುದ್ದೆ ಸೇರಿದಂತೆ ವಿವಿಧ ಅಧಿಕಾರ ಅನುಭವಿಸಲು ಕಾರಣರಾಗಿದ್ದು ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಲವಾಯಿ ನೆನಪಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಶಿವಾಜಿ ಮೆರವಣಿಗೆ ವೇಳೆ ಕಲ್ಲುತೂರಾಟ – 8 ಮಂದಿ ಬಂಧನ
ಸುನೀಲ ಹೆಗಡೆ ಅವರು ಶಾಸಕರಾಗಿ ಐದು ವರ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ಯಾವ ಯೋಜನೆಗಳನ್ನು ತಂದಿದ್ದಾರೆ? ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ? ಎಂಬುದನ್ನು ಮೊದಲು ಸಾರ್ವಜನಿಕವಾಗಿ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ
ಪ್ರಶಸ್ತಿ ಪಡೆದ ಶಾಸಕ : ದೇಶಪಾಂಡೆ ಅವರ ಮುತ್ಸದ್ದಿತನ, ಕಾರ್ಯಕ್ಷಮತೆ ಮತ್ತು ರಾಜಕೀಯ ಹಿರಿತನವನ್ನು ಗಮನಿಸಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇಂತಹ ಹಿರಿಯ ನಾಯಕನ ಮೇಲೆ ಹತಾಶೆಯಿಂದ, ಹಗುರವಾಗಿ ಟೀಕಿಸುವುದು ಸರಿಯಲ್ಲ. ಇದು ಸುನೀಲ ಹೆಗಡೆ ಅವರ ರಾಜಕೀಯ ಅಪ್ರಭುದ್ಧತೆಯನ್ನು ತೋರಿಸುತ್ತದೆ ಎಂದು ಹಲವಾಯಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.























