Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿಯಲ್ಲಿ ಮಾಲಿನ್ಯ ಕಾಟ: ಅಸ್ತಮಾ–ಅಲರ್ಜಿ ಪ್ರಕರಣಗಳ ಏರಿಕೆ

ದಾಂಡೇಲಿಯಲ್ಲಿ ಮಾಲಿನ್ಯ ಕಾಟ: ಅಸ್ತಮಾ–ಅಲರ್ಜಿ ಪ್ರಕರಣಗಳ ಏರಿಕೆ

0
38

ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿಯ ಪರಿಸರದ ಮೇಲಿನ ಒತ್ತಡ, ಕಲುಷಿತ ವಾತಾವರಣದಿಂದ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಜನರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಎರಡು- ಮೂರು ವರ್ಷಗಳಿಂದ ನಗರದಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ಕೈಗಾರಿಕೆಗಳು ಉಗುಳುವ ಹೊಗೆ, ಆಕಾಶದಿಂದ ಬೀಳುವ ಹಾರು ಬೂದಿಯ ಕಣಗಳು, ಕಾಳಿ ನದಿ ಒಡಲು ಸೇರುವ ರಾಸಾಯನಿಕ ಮಿಶ್ರಿತ ನೀರು, ಮಾಲಿನ್ಯದಿಂದ ಇಲ್ಲಿಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದರ ಪರಿಣಾಮ ಅಲರ್ಜಿ, ಚರ್ಮದ ತುರಿಕೆ, ಅಸ್ತಮಾ, ಬ್ರಾಂಕೈಟಿಸ್, ಶ್ವಾಸಕೋಶದ ಸೋಂಕು, ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಪರಿಸರ ಅಧಿಕಾರಿಗಳ ನಿರ್ಲಕ್ಷ: ದಾಂಡೇಲಿಯ ಪರಿಸರದ ಮೇಲಿನ ಒತ್ತಡ, ಧೂಳು, ಹಾರುಬೂದಿ, ಮಲೀನ ನೀರುಗಳ ಕುರಿತು ಸಾರ್ವಜನಿಕರು, ಸಂಘಟನೆಗಳು ಗಮನಕ್ಕೆ ತಂದಿದ್ದರೂ ಈ ಅಧಿಕಾರಿಗಳು ನೆಪ ಮಾತ್ರಕ್ಕೆ ಬಂದು ಉದ್ದಿಮೆಗಳೊಂದಿಗೆ ಶಾಮೀಲಾಗಿ ಅನುಕೂಲಕರ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತಿರುವ ಮಾಹಿತಿ ಇದೆ. ಸ್ಥಳೀಯ ಜನರನ್ನೊಳಗೊಂಡ ಮಾನಿಟರಿಂಗ್ ಸಮಿತಿ ರಚಿಸಲು ಪರಿಸರ ಅಧಿಕಾರಿಗಳು ಸಿದ್ಧರಿಲ್ಲ. ಇದು ಜನಾರೋಗ್ಯಕ್ಕಿಂತ ಉದ್ದಿಮೆದಾರರ ಹಿತಾಸಕ್ತಿ ಕಾಪಾಡುವ ಉದ್ದೇಶ ಅಧಿಕಾರಿಗಳಿಗಿದ್ದಂತಿದೆ. ಇವರಿಂದ ಜನಾರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿ: ದಾಂಡೇಲಿಯಲ್ಲಿ ಹರಡುತ್ತಿರುವ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲಿಯ ಆಸ್ಪತ್ರೆಗಳಲ್ಲಿ ಅಲರ್ಜಿ, ಶ್ವಾಸಕೋಶದ ಸೋಂಕು, ಉಸಿರಾಟದ ಸಮಸ್ಯೆ, ಅಸ್ತಮಾ, ಬ್ರಾಂಕೈಟಿಸ್, ಕಣ್ಣುರಿ, ಚರ್ಮ ತುರಿಕೆಗಳಿಂದ ಸಾಲುಗಟ್ಟಿ ರೋಗಿಗಳು ನಿಂತಿರುತ್ತಾರೆ. ಕ್ರಮೇಣ ಈ ರೋಗ ಗಂಭೀರ ಕಾಯಿಲೆಯಾಗಿ ಪರಿವರ್ತನೆಗೊಳ್ಳುತ್ತದೆ. ಆರೋಗ್ಯ ಇಲಾಖೆ ಮುಖ್ಯಸ್ಥರು ದಾಂಡೇಲಿ ಪರಿಸರದ ಮೇಲಿನ ಒತ್ತಡ, ಮಾಲಿನ್ಯ ನಿಯಂತ್ರಿಸಲು ಜಿಲ್ಲಾಡಳಿತ, ಪರಿಸರ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಗಂಭೀರ ಕ್ರಮಗಳನ್ನು ಜರುಗಿಸಬೇಕಿದೆ.

ವೈದ್ಯರ ಕೊರತೆ: ದಾಂಡೇಲಿಯಲ್ಲಿ ಅಲರ್ಜಿ, ಶ್ವಾಸಕೋಶದ ಸೋಂಕು ಮತ್ತಿತರ ಚರ್ಮ ರೋಗಗಳಿಗೆ ಸಂಬಂಧಿಸಿದಂತೆ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಇಲ್ಲಿಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ವಾರಕ್ಕೊಮ್ಮೆ, 15 ದಿನಗಳಿಗೊಮ್ಮೆ ಧಾರವಾಡ, ಹುಬ್ಬಳ್ಳಿಯಿಂದ ಕನ್ಸಲ್ಟಿಂಗ್ ವೈದ್ಯರು ಬಂದು ಹೋಗುತ್ತಾರೆ. ಈ ವೈದ್ಯರು ಬರುವುದನ್ನು ಕಾದು ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಇಲ್ಲಿಯ ರೋಗಿಗಳದು. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲೂ ಶ್ವಾಸಕೋಶದ ಸೋಂಕು, ಉಸಿರಾಟದ ಸಮಸ್ಯೆಗೆ ತಜ್ಞ ವೈದ್ಯರಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರ ತಜ್ಞ ವೈದ್ಯರೊಬ್ಬರನ್ನು ನೇಮಿಸಿದಲ್ಲಿ ಸ್ಥಳೀಯ ರೋಗಿಗಳಿಗೆ ಅನುಕೂಲವಾಗಲಿದೆ.