ದಾಂಡೇಲಿ: ನಗರಸಭೆಯಿಂದ ಬೀದಿ ನಾಯಿಗಳ ವಿರುದ್ಧ ಕಾರ್ಯಾಚರಣೆ

0
36

ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ ಮತ್ತು ಕಚ್ಚುವ ಘಟನೆಯನ್ನು ನಿಯಂತ್ರಿಸಲು, ನಗರಸಭೆ ಆಡಳಿತ ಇದೀಗ ತೀವ್ರ ಕ್ರಮಕ್ಕೆ ಮುಂದಾಗಿದೆ. ನಗರದಲ್ಲಿ ಬೀದಿ ನಾಯಿ ಕಾಟದಿಂದಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರೆವರೆಗೂ ಹಲವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ, ನಗರದ ಜನರು ಕಳೆದ ಹಲವು ತಿಂಗಳಿಂದ ಆಡಳಿತಕ್ಕೆ ಒತ್ತಾಯ ಮಾಡುತ್ತಿದ್ದರು.

ನಗರ ಸಭಾ ಸದಸ್ಯರು ಮತ್ತು ಜನಪ್ರತಿನಿಧಿಗಳು ಇದುವರೆಗೆ “ಅನುಮತಿ, ಕಾನೂನು ನಿರ್ಬಂಧ, ನಿರ್ದೇಶನ ನಿರೀಕ್ಷೆ” ಎಂಬ ಕಾರಣಗಳನ್ನು ನೀಡುತ್ತಾ ಕ್ರಮ ಕೈಗೊಳ್ಳುವುದನ್ನು ಮುಂದೂಡುತ್ತಿದ್ದರು. ಆದರೆ ಈಗ ನಗರಸಭೆಯ ಅಧ್ಯಕ್ಷರ ಅಧಿಕಾರಾವಧಿ ಮುಗಿದು ಆಡಳಿತಾಧಿಕಾರಿಗಳು ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆ, ಕಾರ್ಯಾಚರಣೆಗೆ ಗಂಭೀರತೆ ಬಂದಿದೆ.

ಬಾಲಕರ ಮೇಲಿನ ದಾಳಿ – ತ್ವರಿತ ಕ್ರಮಕ್ಕೆ ಕಾರಣ: ಕೆಲವು ದಿನಗಳ ಹಿಂದೆ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಬಳಿಯಲ್ಲಿ ಮೂರು ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿದ ಘಟನೆ ದೊಡ್ಡ ಆತಂಕ ಮೂಡಿಸಿತು. ತಕ್ಷಣ ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆಯ ನಂತರ ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ವಿವೇಕ ಬನ್ನೆ ಸ್ಥಳಕ್ಕೆ ಭೇಟಿ ನೀಡಿ, ತಕ್ಷಣ ಕ್ರಮಕ್ಕೆ ಭರವಸೆ ನೀಡಿದರು.

ಬಲೆ ಹಾಕಿ ನಾಯಿಗಳನ್ನು ಹಿಡಿಯುವ ಕಾರ್ಯ ಆರಂಭ: ಭರವಸೆ ನೀಡಿದ ತಕ್ಷಣ, ಪೌರಾಯುಕ್ತ ವಿವೇಕ ಬನ್ನೆ ಅವರು ನಗರಸಭೆಯ ಆರೋಗ್ಯ ವಿಭಾಗ ಮತ್ತು ಸಿಬ್ಬಂದಿಗಳೊಂದಿಗೆ ತುರ್ತು ಸಭೆ ನಡೆಸಿ ಬೀದಿ ನಾಯಿಗಳನ್ನು ಹಿಡಿದು ನಿಯಂತ್ರಿಸುವ ಕಾರ್ಯಾಚರಣೆಯನ್ನು ಆರಂಭಿಸಿದರು.

ರವಿವಾರ ಬೆಳಿಗ್ಗೆಯಿಂದಲೇ ತಂಡಗಳು ನಗರದೆಲ್ಲೆಡೆ ಬಲೆ ಹಾಕಿ ಆಕ್ರಮಣಕಾರಿ ನಾಯಿಗಳನ್ನು ಹಿಡಿದು ಪಶುವೈದ್ಯ ಇಲಾಖೆಯ ಸಹಕಾರದಿಂದ ರೇಬೀಸ್ ಪರೀಕ್ಷೆಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ.

ನಗರದಲ್ಲಿ 500 ಕ್ಕೂ ಹೆಚ್ಚು ಬೀದಿ ನಾಯಿಗಳು: ನಗರಸಭೆಯ ಅಂದಾಜು ಪ್ರಕಾರ ದಾಂಡೇಲಿಯಲ್ಲಿ 500 ಕ್ಕೂ ಹೆಚ್ಚು ಬೀದಿ ನಾಯಿಗಳು ಇದ್ದು, ದಾಳಿ ಮಾಡುವ ಸ್ವಭಾವ ಹೊಂದಿರುವ ನಾಯಿಗಳ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದಿನ ಎರಡು ವಾರಗಳವರೆಗೆ ನಿರಂತರವಾಗಿ ನಡೆಯುವ ಸಾಧ್ಯತೆ ಇದೆ.

ಪೌರಾಯುಕ್ತರ ಕ್ರಮಕ್ಕೆ ಸಾರ್ವಜನಿಕ ಮೆಚ್ಚುಗೆ: ಹಿಂದಿನ ಆಡಳಿತದ ಕಾಲಹರಣದ ನೀತಿಗೆ ವಿರೋಧವಾಗಿ ಪೌರಾಯುಕ್ತ ವಿವೇಕ ಬನ್ನೆ ಅವರು ತ್ವರಿತ ಮತ್ತು ದಿಟ್ಟ ರೀತಿಯಲ್ಲಿ ಕೈಗೊಂಡಿರುವ ಕ್ರಮ ನಗರದ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Previous articleಉಮ್ರಾ ಯಾತ್ರಿಕರ ಬಸ್‌ ದುರಂತ: 42 ಭಾರತೀಯ ಯಾತ್ರಿಕರು ಸಾವನ್ನಪ್ಪಿದ ಶಂಕೆ
Next articleಪುಷ್ಪ ಕೃಷಿಯಲ್ಲಿ ನಳನಳಿಸಿದ ಇಂಜಿನಿಯರಿಂಗ್ ಪದವೀಧರ

LEAVE A REPLY

Please enter your comment!
Please enter your name here