ದಾಂಡೇಲಿ : ಗಲ್ಲಿಗಲ್ಲಿಗಳಲ್ಲಿ ಚಿಂದಿ ಆಯ್ದು ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿರುವ ನಿರ್ಗತಿಕರು ಕೂಡಿಟ್ಟ ಹಣದಲ್ಲಿ ಸೂರೊಂದನ್ನು ಪಡೆದುಕೊಳ್ಳಲು ಕರ್ನಾಟಕ ರಾಜ್ಯ ಗೃಹ ಮಂಡಳಿಗೆ 50 ರಿಂದ 70 ಸಾವಿರ ರೂಪಾಯಿ ನೀಡಿ ವರ್ಷ 10 ಕಳೆದರೂ ಸೂರಿಲ್ಲದೇ ಪರಿತಪಿಸುವಂತಾಗಿದೆ.
ಈ ಬಡ ಜನರನ್ನು ರಾಜ್ಯ ಗೃಹ ಮಂಡಳಿ, ಸ್ಥಳೀಯ ನಗರಸಭೆ ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರರು ಸೇರಿ ವಂಚಿಸಲಾಗಿದೆ ಎಂದು ದಾಂಡೇಲಿಯ ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಗಗ್ಗರಿ ಅವರು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲನೆಯಿಂದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅವರು ದಾಂಡೇಲಿಯಲ್ಲಿ 2016ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿ ಕರ್ನಾಟಕ ರಾಜ್ಯ ಗೃಹ ಮಂಡಳಿ ಜಿ+2 ಮಾದರಿಯ 1100 ಆಶ್ರಯ ಮನೆಗಳನ್ನು ಬಡವರಿಗೆ ನೀಡುವುದಾಗಿ ಪ್ರಕಟಿಸಿ, ಬಡ ಫಲಾನುಭವಿಗಳಿಗೆ ಆಸೆ ತೋರಿಸಿ, ಫಲಾನುಭವಿಗಳು ಕೂಡಿಟ್ಟ ಹಣದ ಜೊತೆ ಸಾಲ ಮಾಡಿ 50 ರಿಂದ 70 ಸಾವಿರ ರೂಪಾಯಿವರೆಗೆ ಗೃಹ ಮಂಡಳಿಗೆ ಪಾವತಿಸಿರುತ್ತಾರೆ.
ಗೃಹ ಮಂಡಳಿ ಅಂಬೇವಾಡಿಯಲ್ಲಿ 54 ಕೋಟಿ 13.40 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ 1106 ಮನೆಗಳ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರಿನ ಗುತ್ತಿಗೆದಾರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಾರಂಭಿಸಿತು. ಈ ಒಪ್ಪಂದದಂತೆ 12 ತಿಂಗಳಲ್ಲಿ ಕಾಮಗಾರಿ ಮುಗಿಸಿ ಫಲಾನುಭವಿಗಳಿಗೆ ಮನೆಯನ್ನು ಹಸ್ತಾಂತರಿಸಬೇಕಿತ್ತು.
ಫಲಾನುಭವಿಗಳು ಇನ್ನೇನೂ ತಮಗೆ ಮನೆ ಸಿಗುತ್ತದೆ ಎನ್ನುವ ಸಂತಸದಲ್ಲಿದ್ದವರಿಗೆ ವರ್ಷ 8 ಕಳೆದರೂ ಮನೆ ಮಾತ್ರ ಸಿಗಲಿಲ್ಲ. ಗೃಹ ಮಂಡಳಿ, ಗುತ್ತಿಗೆದಾರ ಕಂಪನಿ ಮತ್ತು ಸ್ಥಳೀಯ ನಗರಸಭೆ ಅಧಿಕಾರಿಗಳೆಲ್ಲ ಶಾಮೀಲಾಗಿ ಕೇವಲ 110 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಕುಂಟು ನೆಪ ಹೇಳುತ್ತಾ ಉಳಿದ 900 ಫಲಾನುಭವಿಗಳನ್ನು ವಂಚಿಸಲಾಗಿದೆ.
ಫಲಾನುಭವಿಗಳಿಗೆ ನೀಡಿದ 110 ಮನೆಗಳು ಗುಣಮಟ್ಟದಿಂದ ಕೂಡಿಲ್ಲ. ಯಾವುದೇ ಮೂಲಭೂತ ಸೌಕರ್ಯ ನೀಡಿಲ್ಲ. ಕಾಮಗಾರಿಯ ಅಂದಾಜು ವೆಚ್ಚದ ಮುಕ್ಕಾಲುಭಾಗ ಹಣ ಅಧಿಕಾರಿಗಳು ಶಾಮೀಲಾತಿಯಿಂದ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಈಗ ಯೋಜನಾ ವೆಚ್ಚ ಹೆಚ್ಚಾಗಿದೆ. ಹಿಂದಿನ 54 ಕೋಟಿ ಮೊತ್ತಕ್ಕೆ ಮನೆ ನಿರ್ಮಾಣ ಕಾಮಗಾರಿ ಪೂರ್ತಿ ಮಾಡಲು ಸಾಧ್ಯವಿಲ್ಲ.
ಯೋಜನಾ ವೆಚ್ಚ ಹೆಚ್ಚಾಗಿದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುಧಾನ ಬಿಡುಗಡೆಯಾದರೆ ಮಾತ್ರ ಉಳಿದ 900 ಫಲಾನುಭವಿಗಳಿಗೆ ಕಾಮಗಾರಿ ಮುಗಿಸಿ ಮನೆ ವಿತರಿಸಲು ಸಾಧ್ಯವೆಂದು ತಮ್ಮ ಅಸಹಾಯತೆ ತೋಡಿಕೊಳ್ಳುತ್ತಿದ್ದಾರೆ. ಇದರಿಂದ ಬಡ ನಿರ್ಗತಿಕ 900 ಫಲಾನುಭವಿಗಳು ಸಾಲ ಮಾಡಿ ಹಣ ಕಟ್ಟಿ ಮೋಸ ಹೋದಂತಾಗಿದೆ. ಇವರು ಮನೆ ಸಿಗುವ ಭರವಸೆಯನ್ನು ಕಳೆದುಕೊಂಡಿದ್ದಾರೆ.
ಈ ನಿರ್ಗತಿಕರ ಹೆಸರಿನಲ್ಲಿ ಕೆಲವು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರಕಾರದ ಹಣ ಪೋಲು ಮಾಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ದಾಂಡೇಲಿ ಈ ಬಡ ನಿರ್ಗತಿಕ 900 ಫಲಾನುಭವಿಗಳಿಗೆ ಶೀಘ್ರದಲ್ಲೇ ಮನೆ ಸಿಗುವಂತೆ ಸೂಕ್ತ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.