ದಾಂಡೇಲಿ : ಸರ್ಕಾರದಿಂದ ಶಾಸಕರಿಗೆ ನೀಡುವ ವಿಶೇಷ ಅನುದಾನದಲ್ಲಿ ದಾಂಡೇಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 11 ಕೋಟಿ ರೂಪಾಯಿ ನೀಡಿದ್ದೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಸ್ಥಳೀಯ ಶಾಸಕರಾದ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಅವರು ದಾಂಡೇಲಿಯಲ್ಲಿ ವಿವಿಧ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು. ದಾಂಡೇಲಿ ಹೊಸದಾಗಿ ತಾಲೂಕಾದ ನಂತರ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿತ್ತು ಅದನ್ನು ಮನಗಂಡು ತಾಲ್ಲೂಕಿಗೆ ಬೇಕಾದ ಅಗತ್ಯ ಕಛೇರಿ ಕಟ್ಟಡಗಳ ನಿರ್ಮಾಣ ಹಂತ ಹಂತವಾಗಿ ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕಾಡಳಿತ ಸೌಧ, ಆರ್.ಟಿ.ಓ ಕಚೇರಿ, ಸರಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಅಭಿವೃದ್ಧಿ ಮತ್ತಿತರ ಕೆಲಸಗಳು ಆಗಿದೆ.
ಇನ್ನಿತರ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಪ್ರಯತ್ನ ಜಾರಿಯಲ್ಲಿದೆ. ನಗರದ ಮುಖ್ಯ ರಸ್ತೆಗಳ ನಿರ್ಮಾಣ, ವಿದ್ಯುದೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಒಟ್ಟು 26 ವಿವಿಧ ಕಾಮಗಾರಿಗಳು ನಡೆದಿದೆ. ನಗರದಲ್ಲಿ ಅಭಿವೃದ್ಧಿಗಾಗಿ ಸರಕಾರದಿಂದ ಸಾಕಷ್ಟು ಹಣ ತರಲಾಗಿದೆ. ಬೆಳೆಯತ್ತಿರುವ ನಗರದಲ್ಲಿ ಅಷ್ಟೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವದು.
ಇಲ್ಲಿಯ ಸಮಸ್ಯೆಗಳ ಪರಿಹಾರಕ್ಕೆ ನಗರಸಭೆ ಕೂಡ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕರು ಸಹಕರಿಸಬೇಕು. ನಗರದಲ್ಲಿ ಆಶ್ರಯ ಜಿ+2 ಯೋಜನೆಯಡಿ 80 ಮನೆಗಳು ಪೂರ್ಣಗೊಂಡಿದ್ದು ಫಲಾನುಭವಿಗಳಿಗೆ ನೀಡಬೇಕಿದೆ. ಆಶ್ರಯ ಯೋಜನೆಯ ಬಡ ಫಲಾನುಭವಿಗಳಿಗೆ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವದು ಸರಿಯಲ್ಲ. ಅಸಹಾಯಕರಿಗೆ ಸಾಲ ನೀಡಲು ಬ್ಯಾಂಕಗಳು ಮುಂದೆ ಬರಬೇಕು. ಬಡವರಿಗೆ ಸಾಲ ನೀಡುವುದರಿಂದ ಬ್ಯಾಂಕ್ ದಿವಾಳಿಯಾದ ಯಾವುದೇ ಉದಾಹರಣೆ ಇಲ್ಲ ಎಂದು ಅವರು ಹೇಳಿದರು.


























