ವರದಿ -ಎನ್.ಜಯಚಂದ್ರನ್.
ದಾಂಡೇಲಿ (ಉತ್ತರ ಕನ್ನಡ): 2018ರಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ದಾಂಡೇಲಿಯ ಹಿರಿಯ ವಕೀಲ, ಸಮಾಜಮುಖಿ ಹೋರಾಟಗಾರ ಹಾಗೂ ಚಿಂತಕರಾಗಿದ್ದ ಅಜಿತ್ ನಾಯ್ಕ ಅವರ ಬರ್ಬರ ಹತ್ಯೆ ಪ್ರಕರಣದ ತೀರ್ಪು ಇಂದು (ಜನವರಿ 9) ಪ್ರಕಟವಾಗಿದೆ. ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ, ಯಲ್ಲಾಪುರ ಪೀಠದಿಂದ ತೀರ್ಪು ನೀಡಿದ್ದಾರೆ.
ನ್ಯಾಯಾಲಯ ತನ್ನ ತೀರ್ಪಿನಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಶಿರಸಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ: WPL : ಇಂದು ಚಾಂಪಿಯನ್‌ಗಳ ಕದನ – MI vs RCB ವಿಡಿಯೋ ನೋಡಿ: MI vs RCB – WPL 2026 Blockbuster Match!
ಸಮರ್ಥ ವಾದ, ಬಲವಾದ ಸಾಕ್ಷ್ಯ: ಅಜಿತ್ ನಾಯ್ಕ ಅವರ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಮಳಗೀಕರ ಅವರು ಸಮರ್ಥವಾಗಿ ವಾದ ಮಂಡಿಸಿ, ದೃಢ ಸಾಕ್ಷ್ಯಾಧಾರಗಳ ಮೂಲಕ ಪ್ರಮುಖ ಆರೋಪಿಗೆ ದೋಷಾರೋಪಣೆ ಸಾಬೀತುಪಡಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಪಿಐ ಅನೀಸ್ ಮುಜಾವರ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪಿ.ಸಿ. ಮಂಜುನಾಥ ಎಚ್. ಶೆಟ್ಟಿ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ವಕೀಲರೊಬ್ಬರ ಬರ್ಬರ ಹತ್ಯೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಕ್ಕೆ ವಕೀಲ ವೃಂದ ಸಂತಸ ವ್ಯಕ್ತಪಡಿಸಿದ್ದು, ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸ ಪುನಃ ದೃಢಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ವಿವಸ್ತ್ರ ಪ್ರಕರಣ, ಶಾಸಕ ಟೆಂಗಿನಕಾಯಿ ಟೂಲ್‌ಕಿಟ್ – ರಜತ್ ಆರೋಪ
ಘಟನೆ ಹಿನ್ನಲೆ: ದಾಂಡೇಲಿಯನ್ನು ಬೆಚ್ಚಿಬೀಳಿಸಿದ ಹತ್ಯೆಯ ಪ್ರಕರಣ ದಾಂಡೇಲಿ ನಗರದ ಇತಿಹಾಸದಲ್ಲೇ ಕಂಡರಿಯದಂತಹ ಭೀಕರ ಹಾಗೂ ಹಿಂಸಾತ್ಮಕ ಕೃತ್ಯವಾಗಿತ್ತು. ದಾಂಡೇಲಿ ತಾಲೂಕು ರಚನೆಗೆ ಪ್ರಮುಖ ಕಾರಣರಾಗಿದ್ದ ಅಜಿತ್ ನಾಯ್ಕ, ತಮ್ಮ ಕಚೇರಿ ಎದುರು ನಿಂತಿದ್ದ ವೇಳೆ ಪ್ರಮುಖ ಆರೋಪಿ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು.
ಈ ಹತ್ಯೆಯ ಹಿಂದೆ ಭೂ ಮಾಫಿಯಾಗಳ ಸಂಚು ಇದ್ದುದು ತನಿಖೆಯಿಂದ ಬಹಿರಂಗವಾಗಿದೆ. ತಮ್ಮ ಕಕ್ಷಿದಾರ ಮತ್ತು ಜಮೀನಿನ ಮಾಲೀಕರ ಪರವಾಗಿ ಅಜಿತ್ ನಾಯ್ಕ ಗಟ್ಟಿಯಾಗಿ ನಿಂತಿದ್ದರಿಂದ, ಅವರು ಬದುಕಿದ್ದರೆ ಜಮೀನು ಕೈಗೆ ಸಿಗುವುದಿಲ್ಲ ಎಂಬ ಭಯದಿಂದ ಹತ್ಯೆ ನಡೆಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಧೂಳೆಬ್ಬಿಸಿದ ಟಾಕ್ಸಿಕ್: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?
ಜೈಲಿನಲ್ಲೇ ಕುಳಿತು ಜಮೀನು ಮಾರಾಟ ಯತ್ನ: ಹತ್ಯೆಯ ನಂತರ ಆರೋಪಿಗಳು ಜೈಲಿನಲ್ಲೇ ಇದ್ದುಕೊಂಡು, ಕಾಳಿನದಿ ದಂಡೆಯಲ್ಲಿರುವ ವಿವಾದಿತ ಜಮೀನನ್ನು ಪ್ರವಾಸೋದ್ಯಮಿಯೊಬ್ಬರಿಗೆ ಮಾರಾಟ ಮಾಡಲು ಮುಂದಾಗಿ, ಲಕ್ಷಾಂತರ ರೂಪಾಯಿ ಮುಂಗಡ ಪಡೆದು ಫಜೀತಿಗೆ ಸಿಲುಕಿದ್ದಾರೆ. ಈ ವೇಳೆ ಪಿ.ಟಿ.ಸಿ.ಎಲ್. ಕಾಯ್ದೆ ಆರೋಪಿಗಳಿಗೆ ಮುಳುವಾಗಿದೆ ಎಂದು ತಿಳಿದು ಬಂದಿದೆ.
ದಿಟ್ಟ ಹೋರಾಟಗಾರನ ನಷ್ಟ: ಅಜಿತ್ ನಾಯ್ಕ ಅವರು ಕೇವಲ ವಕೀಲ ಮಾತ್ರವಲ್ಲ, ಬಹುಮುಖ ವ್ಯಕ್ತಿತ್ವದ ಹೋರಾಟಗಾರ ಮತ್ತು ಚಿಂತಕರಾಗಿದ್ದರು. ದಾಂಡೇಲಿ ತಾಲೂಕು ರಚನೆಗೆ ಮುನ್ನಡೆ ಹಾಗೂ ದಾಂಡೇಲಿ ನ್ಯಾಯಾಲಯ ಸ್ಥಾಪನೆಗೆ ಹೋರಾಟಕ್ಕಾಗಿ 45 ದಿನಗಳ ಧರಣಿ ಸತ್ಯಾಗ್ರಹದ ಮೂಲಕ ‘ದಾಂಡೇಲಿ ಬಚಾವೋ ಆಂದೋಲನ’ ನಡೆಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು
ಅವರ ಹತ್ಯೆಯಿಂದ ನಗರದಲ್ಲಿ ಭೀತಿ, ಆಕ್ರೋಶ ಮತ್ತು ಅಸಹಾಯಕತೆ ವ್ಯಾಪಕವಾಗಿ ಆವರಿಸಿತ್ತು.









