ರಾಜಿಯಾಗಬಲ್ಲ ಬಾಕಿ ಪ್ರಕರಣಗಳಿಗೆ ತ್ವರಿತ ಹಾಗೂ ಸೌಹಾರ್ದ ಪರಿಹಾರಕ್ಕೆ ಸುವರ್ಣಾವಕಾಶ
ದಾಂಡೇಲಿ: ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರ, ಕಡಿಮೆ ಖರ್ಚಿನಲ್ಲಿ ಹಾಗೂ ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯದಾದ್ಯಂತ 90 ದಿನಗಳ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾಂಡೇಲಿ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ತೇಜಸ್ವಿನಿ ಸೊಗಲದ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ್ದು 2026ರ ಜನವರಿ 2 ರಿಂದ ಮುಂದಿನ 90 ದಿನಗಳ ಕಾಲ ಈ ವಿಶೇಷ ಅಭಿಯಾನ ನಡೆಯಲಿದ್ದು, ಸ್ಥಳೀಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆ (Mediation) ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಉತ್ತಮ ಅವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ. ನ್ಯಾಯಾಲಯದ ಮೊರೆ ಹೋಗಿ ವರ್ಷಗಟ್ಟಲೆ ತೀರ್ಪಿಗಾಗಿ ಕಾಯಬೇಕಾದ ಪರಿಸ್ಥಿತಿಯನ್ನು ತಪ್ಪಿಸಿ, ತಕ್ಷಣ ಪರಿಹಾರ ಪಡೆಯಲು ಇದೊಂದು ಅಪೂರ್ವ ಅವಕಾಶವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹೊಸ ವರ್ಷ ಆಚರಣೆ ಸೂಚನೆ ಪಾಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
ಯಾವೆಲ್ಲಾ ಪ್ರಕರಣಗಳಿಗೆ ಮಧ್ಯಸ್ಥಿಕೆ ಅವಕಾಶ?: ಈ ಅಭಿಯಾನದಡಿ ರಾಜಿಯಾಗಬಲ್ಲ ಹಲವು ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಬಹುದಾಗಿದೆ. ಅವುಗಳಲ್ಲಿ ಪ್ರಮುಖವಾಗಿ:
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು
ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ (MACT) ಪ್ರಕರಣಗಳು
ಬ್ಯಾಂಕ್ ವಸೂಲಾತಿ ಪ್ರಕರಣಗಳು
ಕಾರ್ಮಿಕ ಮತ್ತು ಕೈಗಾರಿಕಾ ಕಾರ್ಮಿಕರ ವೇತನ ಹಾಗೂ ಕ್ಷೇಮಕ್ಕೆ ಸಂಬಂಧಿಸಿದ ವಿವಾದಗಳು
ಭೂಸ್ವಾಧೀನ ಪ್ರಕರಣಗಳು
ಚೆಕ್ ಅಮಾನ್ಯ (Cheque Bounce) ಪ್ರಕರಣಗಳು
ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳು
ವೈವಾಹಿಕ ಹಾಗೂ ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನ ಹೊರತುಪಡಿಸಿ)
ಇತರೆ ಪರಸ್ಪರ ಒಪ್ಪಂದ ಸಾಧ್ಯವಾದ ಪ್ರಕರಣಗಳು
ಇಂತಹ ಪ್ರಕರಣಗಳಲ್ಲಿ ಉಭಯ ಪಕ್ಷಗಾರರು ಪರಸ್ಪರ ಒಪ್ಪಿಗೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಂಧಾನಕಾರರು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಗಿ ಭದ್ರತೆ
ಸೌಹಾರ್ದಯುತ ಪರಿಹಾರದಿಂದ ಬಾಂಧವ್ಯ ಉಳಿವು: ಮಧ್ಯಸ್ಥಿಕೆಯ ಮೂಲಕ ಪ್ರಕರಣ ಬಗೆಹರಿದಲ್ಲಿ, ಎರಡೂ ಪಕ್ಷಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರಿಂದ ಕಾನೂನು ಹೋರಾಟದ ಬದಲಿಗೆ ಬಾಂಧವ್ಯ ಉಳಿಸಿಕೊಂಡು ವಿವಾದಕ್ಕೆ ತೆರೆ ಎಳೆಯಲು ಸಾಧ್ಯವಾಗುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರವನ್ನು ಉಭಯ ಪಕ್ಷಗಳು ಒಪ್ಪಿಕೊಂಡಾಗ ಮಾತ್ರ ರಾಜಿ ಸಾಧ್ಯವಾಗುತ್ತದೆ ಎಂದು ತೇಜಸ್ವಿನಿ ಸೊಗಲದ ಸ್ಪಷ್ಟಪಡಿಸಿದ್ದಾರೆ.
ಕಡಿಮೆ ವೆಚ್ಚ – ಶೀಘ್ರ ನ್ಯಾಯ: ಈ ಅಭಿಯಾನದ ಪ್ರಮುಖ ಉದ್ದೇಶ ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ನ್ಯಾಯ ಒದಗಿಸುವುದಾಗಿದೆ. ನ್ಯಾಯಾಲಯದ ವ್ಯಯವಿಲ್ಲದೆ, ಸುಲಭ ಹಾಗೂ ವೇಗವಾಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಇದು ವಿಶೇಷ ಅವಕಾಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾನೂನು ಸೇವಾ ಸಮಿತಿ, ದಾಂಡೇಲಿ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






















