ದಾಂಡೇಲಿ: ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಹತ್ತಿರ ಮಂಗಳವಾರ (ನ.18) ಮಧ್ಯಾಹ್ನ ಗ್ಯಾಸ್ ಟ್ಯಾಂಕರ್ ಉರುಳಿದ ಪರಿಣಾಮ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಟ್ಯಾಂಕರ್‌ನಿಂದ ಮಿಥೇನ್ ಗ್ಯಾಸ್ ಸೋರಿಕೆ ಆಗುತ್ತಿರುವ ಮಾಹಿತಿ ದೊರೆಯುತ್ತಿದ್ದಂತೆ, ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಿಲ್ಲಾಡಳಿತ ತಕ್ಷಣವೇ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮಿಪ್ರಿಯಾ, ಅಪಘಾತ ಸಂಭವಿಸಿದ ಪ್ರದೇಶದ 1 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಓಡಾಟ, ವಾಹನ ಸಂಚಾರ ಮತ್ತು ವಾಹನ ನಿಲುಗಡೆಗೆ ಸಂಪೂರ್ಣ ನಿಷೇಧ ಹೇರಿರುವ ಆದೇಶ ಹೊರಡಿಸಿದ್ದಾರೆ.
ಯಾವ ಕಾಯ್ದೆಗಳಡಿ ನಿಷೇಧಾಜ್ಞೆ?: ಈ ಆದೇಶವನ್ನು ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 (ಬಿ)(ಸಿ) ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಾಯ್ದೆ 2023ರ ಕಲಂ 163 ಅನ್ವಯ ಜಾರಿಗೊಳಿಸಲಾಗಿದೆ.
ಟ್ಯಾಂಕರ್ ತೆರವುಗೊಳಿಸುವವರೆಗೆ ನಿಷೇಧ ಜಾರಿ: ಅಂಕೋಲಾ ತಹಶೀಲ್ದಾರರು ನೀಡಿದ ವರದಿ ಪ್ರಕಾರ, ಗ್ಯಾಸ್ ಸೋರಿಕೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಿರುವುದು ಸ್ಪಷ್ಟವಾಗಿ ತಿಳಿದಿದ್ದು, ಅದರ ಆಧಾರದ ಮೇಲೆ ಜಿಲ್ಲಾಡಳಿತ ಈ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ. ಟ್ಯಾಂಕರ್ ಸಂಪೂರ್ಣವಾಗಿ ತೆರವುಗೊಳಿಸುವವರೆಗೆ ಅಥವಾ ಮುಂದಿನ ಆದೇಶವರೆಗೆ ಈ ನಿಷೇಧ ಮುಂದುವರೆಯಲಿದೆ.ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಪ್ರದೇಶ ಪ್ರವೇಶ ನಿಷೇಧಿಸಲಾಗಿದೆ.
ಪೊಲೀಸರ ನಿಯಂತ್ರಣ: ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಜಾರಿಯಲ್ಲಿ ತರಲು ನಿರ್ದೇಶಿಸಲಾಗಿದೆ. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.


























