Home Advertisement
Home ನಮ್ಮ ಜಿಲ್ಲೆ ಉಡುಪಿ ಮಲ್ಪೆ: ಹಿಂದೂ ಮುಖಂಡನಿಗೆ ಚೂರಿ ಇರಿತ: ಐವರ ಬಂಧನ

ಮಲ್ಪೆ: ಹಿಂದೂ ಮುಖಂಡನಿಗೆ ಚೂರಿ ಇರಿತ: ಐವರ ಬಂಧನ

0
52

ಸಂ.ಕ. ಸಮಾಚಾರ, ಉಡುಪಿ: ಮಲ್ಪೆ ಬೀಚ್ ಸಮೀಪ ಮಂಗಳವಾರ ರಾತ್ರಿ ಹಿಂದೂ ಸಂಘಟನೆ ಮುಖಂಡರೊಬ್ಬರ ಮೇಲೆ ಚೂರಿ ದಾಳಿ ನಡೆದ ಘಟನೆ ಆತಂಕ ಮೂಡಿಸಿದೆ. ಹಿಂದೂ ಯುವಸೇನೆ ಮುಖಂಡ ಹಾಗೂ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜು ಕೊಳ ಗಾಯಗೊಂಡಿದ್ದಾರೆ.

ಪ್ರೀತಿ ವಿಚಾರದಲ್ಲಿ ಜಗಳ: ಮಂಜು ಕೊಳ ಅವರು ಬೀಚ್ ಬಳಿ ಜೋಡಿಯೊಂದರ ಪ್ರೀತಿ-ಪ್ರೇಮದ ವಿಚಾರವಾಗಿ ರಾಜಿ ಪಂಚಾಯಿತಿ ಮಾಡಲು ತೆರಳಿದ್ದರು ಎನ್ನಲಾಗಿದೆ. ಧನುಷ್ ಎಂಬ ಯುವಕನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳ ತೀವ್ರಗೊಂಡಿದ್ದು, ಈ ವೇಳೆ ಇಬ್ಬರು ಯುವಕರು ಚೂರಿಯಿಂದ ದಾಳಿ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.

ಚೂರಿ ಹೊಟ್ಟೆ ಭಾಗಕ್ಕೆ ಇರಿದ ಪರಿಣಾಮ ಮಂಜು ಕೊಳ ಅಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಸಕರ ಭೇಟಿ: ಘಟನೆಯ ಮಾಹಿತಿ ತಿಳಿದ ತಕ್ಷಣ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

ಐವರು ಬಂಧನ: ಪ್ರಕರಣ ಸಂಬಂಧ ಪಲಿಮಾರು ನಿವಾಸಿಗಳಾದ ಪ್ರಜೇಶ್, ಪುನೀತ್, ಅಮೃತ್ ಭಂಡಾರಿ, ಅಭಿಜಿತ್ ಸೇರಿದಂತೆ ಐವರನ್ನು ಮಲ್ಪೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪ್ರತಿಕ್ರಿಯಿಸಿ, “ಇದು ವೈಯಕ್ತಿಕ ಕಾರಣದಿಂದ ನಡೆದ ಘಟನೆ. ಕೋಮು ವಿಚಾರ ಇದರಲ್ಲಿ ಇಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.