ಯೋಗಾನರಸಿಂಹಸ್ವಾಮಿ ದೇವಾಲಯ: ಹೊಸ ವರ್ಷಕ್ಕೆ ಸಿದ್ದವಾಗುತ್ತಿವೆ ತಿರುಪತಿ ಮಾದರಿಯ 2 ಲಕ್ಷ ಲಡ್ಡು

0
8

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಪ್ರಸಿದ್ಧ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಹೊಸ ವರ್ಷೋತ್ಸವದ ಅಂಗವಾಗಿ ಭಕ್ತರಿಗೆ ಭಾರೀ ಪ್ರಮಾಣದ ಪ್ರಸಾದ ವಿತರಣೆಗೆ ಭವ್ಯ ಸಿದ್ಧತೆ ಕೈಗೊಳ್ಳಲಾಗಿದೆ. 1994ರಿಂದ ನಿರಂತರವಾಗಿ ಲಡ್ಡು ವಿತರಣಾ ಸೇವೆ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಸಂಪ್ರದಾಯದಂತೆ ವಿಶೇಷ ಪೂಜೆ, ಉತ್ಸವಗಳು ಹಾಗೂ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹೊಸ ವರ್ಷದ ದಿನ ಶ್ರೀ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ನೆರವೇರಿಸಲಾಗುವುದು. ಜೊತೆಗೆ ಶ್ರೀರಂಗ ಮತ್ತು ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ತೋಮಾಲೆ, ಸ್ವರ್ಣಪುಷ್ಪಗಳಿಂದ ಅಲಂಕಾರ ಮಾಡಿ ಸಹಸ್ರನಾಮಾರ್ಚನೆ ಸಲ್ಲಿಸಲಾಗುತ್ತದೆ. ಅಲ್ಲದೆ ದೇವಾಲಯದ ಉತ್ಸವ ಮೂರ್ತಿಯಾದ ಶ್ರೀ ರಂಗನಾಥಸ್ವಾಮಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ನಡೆಯಲಿದ್ದು, ಈ ವೇಳೆ 50 ಕ್ವಿಂಟಾಲ್ ಪುಳಿಯೊಗರೆ ಮಹಾಪ್ರಸಾದವಾಗಿ ಅರ್ಪಿಸಲಾಗುತ್ತದೆ.

ಇದನ್ನೂ ಓದಿ: ಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಿರುಪತಿ ಮಾದರಿಯ ಎರಡು ಲಕ್ಷ ಲಡ್ಡುಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ತಿರುಪತಿ ಮಾದರಿಯ 2 ಲಕ್ಷ ಲಡ್ಡು ವಿತರಣೆ: ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಮಾತನಾಡಿ, ಈ ವರ್ಷ ಭಕ್ತರಿಗಾಗಿ 2 ಕೆಜಿ ತೂಕದ 10,000 ಲಡ್ಡುಗಳು, 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳು ತಯಾರಿಸಲಾಗಿದ್ದು, ಯಾವುದೇ ಜಾತಿ–ಮತ ಭೇದವಿಲ್ಲದೆ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಲಡ್ಡು ಪ್ರಸಾದ ತಯಾರಿಕೆಗೆ 100 ಮಂದಿ ನುರಿತ ಬಾಣಸಿಗರನ್ನು ನಿಯೋಜಿಸಲಾಗಿದ್ದು, ಡಿಸೆಂಬರ್ 20ರಿಂದ 31ರವರೆಗೆ ನಿರಂತರವಾಗಿ ಲಡ್ಡು ತಯಾರಿಕೆ ಕಾರ್ಯ ನಡೆಯಲಿದೆ ಎಂದರು.

ಇದನ್ನೂ ಓದಿ: ಚಿತ್ರದುರ್ಗ ಬಸ್‌ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ

ಲಡ್ಡು ತಯಾರಿಕೆಗೆ ಬಳಸಿದ ಸಾಮಗ್ರಿಗಳು: ಈ ಬಾರಿ ಲಡ್ಡು ತಯಾರಿಕೆಗೆ ಅಪಾರ ಪ್ರಮಾಣದ ಶುದ್ಧ ಮತ್ತು ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ಅವುಗಳ ವಿವರ ಹೀಗಿದೆ: 100 ಕ್ವಿಂಟಾಲ್ ಕಡ್ಲೆಹಿಟ್ಟು. 200 ಕ್ವಿಂಟಾಲ್ ಸಕ್ಕರೆ. 10,000 ಲೀಟರ್ ಖಾದ್ಯ ತೈಲ. 500 ಕೆಜಿ ಗೋಡಂಬಿ. 500 ಕೆಜಿ ಒಣದ್ರಾಕ್ಷಿ. 250 ಕೆಜಿ ಬಾದಾಮಿ. 1,000 ಕೆಜಿ ಡೈಮಂಡ್ ಸಕ್ಕರೆ. 2,000 ಕೆಜಿ ಬೂರಾ ಸಕ್ಕರೆ. 50 ಕೆಜಿ ಪಿಸ್ತಾ. 50 ಕೆಜಿ ಏಲಕ್ಕಿ. 50 ಕೆಜಿ ಜಾಕಾಯಿ ಮತ್ತು ಜಾಪತ್ರೆ. 50 ಕೆಜಿ ಪಚ್ಚೆ ಕರ್ಪೂರ. 200 ಕೆಜಿ ಲವಂಗ

ಇಂತಹ ವೈಭವಯುತ ಪೂಜೆ, ಉತ್ಸವ ಮತ್ತು ಮಹಾಪ್ರಸಾದ ವಿತರಣೆಯಿಂದ ಶ್ರೀರಂಗಪಟ್ಟಣ ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ, ಅಳಿಯ ಗೋವಿಂದರಾಜು ಸೇರಿದಂತೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಗಣ್ಯರು ಹಾಜರಿದ್ದರು.

Previous articleಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು