ಲಿಂಗನಮಕ್ಕಿ ಡ್ಯಾಂ ನೀರು ಬಿಡುಗಡೆ: ಜೋಗ ವೈಭವ ನೋಡ ಬನ್ನಿ

0
60

ಶಿವಮೊಗ್ಗ: ಲಿಂಗನಮಕ್ಕಿ ಡ್ಯಾಂನಿಂದ ನೀರನ್ನು ಶರಾವತಿ ನದಿಗೆ ಹರಿಸಲಾಗಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಡ್ಯಾಂಗೆ ಸುಮಾರು 59,891 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಮಂಗಳವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯದ 11 ಗೇಟ್‌ಗಳ ಮೂಲಕ 14,000 ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಬಿಡುಗಡೆ ಮಾಡಲಾಗಿದೆ.

1819.12 ಅಡಿ ಎತ್ತರದ ಲಿಂಗನಮಕ್ಕಿ ಡ್ಯಾಂನಲ್ಲಿ ಸದ್ಯ 1815.05 ಅಡಿ ನೀರಿನ ಸಂಗ್ರಹವಿದೆ. ಸೋಮವಾರ ಸಂಜೆಯೇ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತದೆ ಎಂದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿತ್ತು.

ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಂನಿಂದ ಬಿಡುಗಡೆ ಮಾಡಿರುವ ನೀರು ಮಧ್ಯಾಹ್ನದ ವೇಳೆಗೆ ಜೋಗ ಜಲಪಾತಕ್ಕೆ ತಲುಪುವ ನಿರೀಕ್ಷೆ ಇದೆ. ಡ್ಯಾಂ ನೀರು ಬಿಡುಗಡೆಯ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಜೋತ ಜಲಪಾತದ ವೈಭವ ಹೆಚ್ಚಾಗಲಿದೆ.

ಈಗಾಗಲೇ ಪ್ರತಿನಿತ್ಯ ನೂರಾರು ಜನರು ಜೋಗ ಜಲಪಾತ ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ. ಈಗ ಲಿಂಗನಮಕ್ಕಿ ಡ್ಯಾಂ ನೀರು ಜಲಪಾತದಿಂದ ಧುಮ್ಮಿಕ್ಕಲಿದ್ದು, ಇದನ್ನು ನೋಡಲು ಇನ್ನಷ್ಟು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.

ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಿಗೆ ಬೆಳಕು ನೀಡುವ, ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ.

ಸೋಮವಾರವೇ ಕೆಪಿಸಿಎಲ್ ಡ್ಯಾಂ ಭರ್ತಿಯಾಗುವತ್ತ ಸಾಗುತ್ತಿದೆ. ಯಾವುದೇ ಸಮಯದಲ್ಲೂ ಸಹ ಶರಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ನದಿ ಪಾತ್ರದಲ್ಲಿ ಪ್ರಕಟಣೆ ಮೂಲಕ ಜನರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿತ್ತು.

ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುಗಡೆ ಮಾಡಿರುವುದರಿಂದ ಡ್ಯಾಂ ಕೆಳಭಾಗ ಹಾಗೂ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಪ್ರವಾಸಿಗರು ನದಿಯ ನೀರಿಗೆ ಇಳಿಯಬಾರದು ಎಂದು ಕೆಪಿಸಿಎಲ್​ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಕರ್ನಾಟಕಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡುವಲ್ಲಿ ಇದು ಪ್ರಮುಖ ಡ್ಯಾಂ ಆಗಿದೆ.

ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಲಿಂಗನಮಕ್ಕಿ ರಾಜ್ಯದಲ್ಲಿ ತಡವಾಗಿ ಭರ್ತಿಯಾಗುವ ಜಲಾಶಯವಾಗಿದೆ. ಡ್ಯಾಂ ಇದುವರೆಗೂ 23 ಬಾರಿ ತುಂಬಿದೆ. 2024ರಲ್ಲಿ ಆಗಸ್ಟ್ 1ರಂದು ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿತ್ತು.

ಲಿಂಗನಮಕ್ಕಿಯಿಂದ ಬಿಡುಗಡೆ ಮಾಡುವ ನೀರು ಜೋಗ ಜಲಪಾತಕ್ಕೆ ಬರುತ್ತದೆ. ಆದ್ದರಿಂದ ಜೋಗ ಮೈದುಂಬಿ ಧುಮ್ಮಿಕ್ಕುತ್ತದೆ. ಇದನ್ನು ನೋಡಲು ನೂರಾರು ಪ್ರವಾಸಿಗರು ಆಗಮಿಸುತ್ತಾರೆ.

ಜೋಗಕ್ಕೆ ಆಗಮಿಸುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ವಾ‌ಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾವೇರಿ, ಹುಬ್ಬಳ್ಳಿ, ಧಾರವಾಡ ಮತ್ತು ಇತರ ಸ್ಥಳದಿಂದ ಜೋಗಕ್ಕೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿವೆ. ಕೆಎಸ್ಆರ್‌ಟಿಸಿ ದಾವಣಗೆರೆ ವಿಭಾಗ ಸಹ ಜೋಗ, ಸಿಗಂದೂರು ಟೂರ್ ಪ್ಯಾಕೇಜ್ ಆರಂಭಿಸಿದೆ.

Previous articleKarnataka Weather: ಕರ್ನಾಟಕದಲ್ಲಿ ಆ.20ರಿಂದ ಮಳೆ ಆರ್ಭಟ ಕಡಿಮೆ
Next articleಬಾಗಲಕೋಟೆ: ತಿರುಪತಿಯಿಂದ ವಾಪಸ್ ಆಗುವಾಗ ರೈಲಿನಲ್ಲಿ ಹೃದಯಾಘಾತ, ಯುವಕ ಸಾವು

LEAVE A REPLY

Please enter your comment!
Please enter your name here