ದ್ವೇಷ ಭಾಷಣ ವಿರೋಧಿ ಕಾಯ್ದೆಯಿಂದ ಕರಾಳ ಪರಿಸ್ಥಿತಿ ಸೃಷ್ಟಿ

0
1

ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆಯು 1975ರ ತುರ್ತು ಪರಿಸ್ಥಿತಿಗಿಂತಲೂ ಅತ್ಯಂತ ಕರಾಳ ಪರಿಸ್ಥಿತಿಯನ್ನು ರಾಜ್ಯದಲ್ಲಿ ಸೃಷ್ಟಿಸಲಿದ್ದು, ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಮನವಿ ಸಲ್ಲಿಕೆ ಮಾಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶದಲ್ಲಿ ತುರ್ತುಸ್ಥಿತಿ ಘೋಷಿಸಿ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎನ್ನುವವರನ್ನು ಜೈಲಿಗೆ ಹಾಕಲಾಗಿತ್ತು. ಈಗ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ದ್ವೇಷ ಭಾಷಣ ಕಾಯ್ದೆಯು ಅದೇ ಹಾದಿಯಲ್ಲಿದ್ದು, ಇದನ್ನು ವಿರೋಧಿಸಿ ಹಿಂದೂಗಳೆಲ್ಲರೂ ಒಟ್ಟಾಗಿ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಬಿಜೆಪಿ ಸಂಸದರು ರಬ್ಬರ್ ಸ್ಟಾಂಪ್, ನಿಷ್ಪ್ರಯೋಜಕರು

ಸರ್ಕಾರದ ವಿರುದ್ಧ ವಾಗ್ದಾಳಿ: ಇದೇ ವೇಳೆ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಗೊಂದಲದಿಂದಾಗಿ ರಾಜ್ಯದ ಜನತೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇಬ್ಬರ ಹೇಳಿಕೆಗಳಿಗೂ ತಾಳ-ತಂತಿಯಿಲ್ಲದಂತಾಗಿದ್ದು, ಇಡೀ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಕುರುಬ ಸಮಾಜದ ಸ್ವಾಮೀಜಿಯವರು ಕುರುಬರೇ ಮುಖ್ಯಮಂತ್ರಿಯಾಗಬೇಕು ಎನ್ನುತ್ತಾರೆ. ಒಕ್ಕಲಿಗ ಸಮಾಜದ ಸ್ವಾಮೀಜಿಯವರು ಒಕ್ಕಲಿಗರೇ ಮುಖ್ಯಮಂತ್ರಿಯಾಗಬೇಕು ಎನ್ನುತ್ತಾರೆ. ದಲಿತ ಸಮಾಜದ ಸ್ವಾಮೀಜಿಯವರು ದಲಿತರೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡುವ ಮೂಲಕ ಸ್ವಾಮೀಜಿಗಳನ್ನು ಅವರವರ ಜಾತಿಗಳಿಗೆ ಸೀಮಿತಗೊಳಿಸಿದ್ದಾರೆ. ಈ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಧಾನಸಭಾ ಚುನಾವಣೆಗಳು ಬರಬಹುದು: ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ಶಕ್ತಿ ಕಳೆದುಕೊಂಡಿದ್ದು, ರಾಜ್ಯದ ಉಸ್ತುವಾರಿಗಳೂ ನಾಪತ್ತೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದರೂ ಅವರಿಗೆ ರಾಜ್ಯದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಸಿಎಂ ಮತ್ತು ಡಿಸಿಎಂ ಕುರ್ಚಿ ಜಗಳದಲ್ಲಿ ವಿಧಾನಸಭಾ ಚುನಾವಣೆಗಳು ಬಂದರೂ ಬರಬಹುದು. ಮುಂದಿನ ಚುನಾವಣೆಯಲ್ಲಿ ಹಿಂದುತ್ವದ ಪರ ಮತ್ತು ವಿರೋಧಿಗಳ ನಡುವೆ ನೇರ ಹೋರಾಟ ನಡೆಯಲಿದೆ ಎಂದು ವಿವರಿಸಿದರು.

Previous articleಬಿಜೆಪಿ ಸಂಸದರು ರಬ್ಬರ್ ಸ್ಟಾಂಪ್, ನಿಷ್ಪ್ರಯೋಜಕರು