Sigandur Bridge: ಕೋರ್ಟ್‌ ಮೆಟ್ಟಿಲೇರಿದ ಸಿಗಂದೂರು ಸೇತುವೆಯ ಹೆಸರಿನ ಚರ್ಚೆ!

0
64

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಬಳಿಕ ಜಿಲ್ಲೆಯಲ್ಲಿ ಮತ್ತೊಂದು ಪ್ರಮುಖ ಯೋಜನೆ ಹೆಸರಿನ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿದೆ. ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ಮಾಡಲಾಗಿರುವ ಸಿಗಂದೂರು ಸೇತುವೆ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಸೇತುವೆ ಯಾವ ಹೆಸರಿಡಬೇಕು? ಎಂಬುದು ಚರ್ಚೆಯ ವಿಚಾರ.

ದೇಶದಲ್ಲಿಯೇ 2ನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಗಂದೂರು ಸೇತುವೆಯು ಜುಲೈ 14ರಂದು ಲೋಕಾರ್ಪಣೆಯಾಗಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿಗಂದೂರು ಸೇತುವೆ ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು. ಸುಮಾರು 473 ಕೋಟಿ ರೂಪಾಯಿ ವೆಚ್ಚದಲ್ಲಿ 2.44 ಕಿ. ಮೀ. ಉದ್ದದ ಸೇತುವೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಈ ಸಿಗಂದೂರು ಸೇತುವೆಗೆ ಯಾರ ಹೆಸರು ಇಡಬೇಕು? ಎಂಬುದು ಚರ್ಚೆಯ ವಿಚಾರವಾಗಿದೆ.

ಇಂದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಸಿಗಂದೂರು ಸೇತುವೆಯನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಸಂಸದ ಬಿ. ವೈ. ರಾಘವೇಂದ್ರ, “ಐತಿಹಾಸಿಕ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡುವಂತೆ ಪಕ್ಷದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಸಿಂಗದೂರು ಧಾರ್ಮಿಕ ಪ್ರವಾಸಿ ಕೇಂದ್ರವಾಗಿಯೂ ಅಭಿವೃದ್ಧಿ ಕಂಡಿದೆ. ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರಿಡಬೇಕೆಂಬುದು ಈ ಪ್ರದೇಶದ ಬಹುಜನರ ಅಪೇಕ್ಷೆ” ಎಂದು ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಸಿಗಂದೂರು ಸೇತುವೆಗೆ ಸ್ವಯಂ ಪ್ರೇರಣೆಯಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೆಸರಿಡಬೇಕು ಎಂದು ಹರನಾಥ್ ರಾವ್ ಎಂಬುವವರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಸಿಗಂದೂರು ಸೇತುವೆಗೆ ಯಾವ ಹೆಸರು ಇಡಬೇಕು? ಎಂದು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿದ ಬಳಿಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಹೆಸರಿನ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

“ಶರಾವತಿ ಹಿನ್ನೀರಿನ ಜನರ ಬೇಡಿಕೆಯಾಗಿದ್ದ ಸಿಗಂದೂರು ಸೇತುವೆಯ ನಿರ್ಮಾಣಕ್ಕೆ ಬಿ. ಎಸ್. ಯಡಿಯೂರಪ್ಪ ಕಾರಣ. ಆದ್ದರಿಂದ ಸೇತುವೆಗೆ ಅವರ ಹೆಸರನ್ನು ಇಡಬೇಕು. ಈ ಕುರಿತು ಹೈಕೋರ್ಟ್‌ನಲ್ಲಿ ಸ್ವಯಂ ಪ್ರೇರಿತವಾಗಿ ರಿಟ್ ಅರ್ಜಿ ಸಲ್ಲಿಸಿದ್ದೇನೆ” ಎಂದು ಹರನಾಥ್ ರಾವ್ ಹೇಳಿದ್ದಾರೆ.

“60-70 ವರ್ಷಗಳಿಂದ ಶರಾವತಿ ಹಿನ್ನೀರು ಭಾಗದಲ್ಲಿ ಸೇತುವೆ ಇರಲಿಲ್ಲ. ಯಡಿಯೂರಪ್ಪ ಅವರ ಹೋರಾಟದಿಂದ ಸೇತುವೆ ನಿರ್ಮಾಣವಾಗಿದೆ. ಆದ್ದರಿಂದ ಯಡಿಯೂರಪ್ಪ ಹೆಸರಿಡಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದೇನೆ. ಈ ಕುರಿತು ಕರ್ನಾಟಕ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಹ ಮನವಿ ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ ರಿಟ್ ಅರ್ಜಿಯನ್ನು ಹೈಕೋರ್ಟ್ ಸ್ವೀಕಾರ ಮಾಡಿದೆ. ಸದ್ಯಕ್ಕೆ ಸಿಗಂದೂರು ಸೇತುವೆಗೆ ಯಾರ ಹೆಸರನ್ನು ಇಡಬಾರದು ಎಂದು ನಿರ್ದೇಶನ ನೀಡಿದೆ. ಶರಾವತಿ ಹಿನ್ನೀರಿನ ಜನರು ಸಹ ಯಡಿಯೂರಪ್ಪ ಹೆಸರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹರನಾಥ್ ರಾವ್ ಹೇಳಿದ್ದಾರೆ.

Previous articleಕೆಎಸ್‌ಆರ್‌ ಬೆಂಗಳೂರು-ಹುಬ್ಬಳ್ಳಿ ರೈಲು ಸಿಂಧನೂರಿಗೆ ವಿಸ್ತರಣೆ: ವೇಳಾಪಟ್ಟಿ, ನಿಲ್ದಾಣ
Next articleNWKRTC: ಹುಬ್ಬಳ್ಳಿ-ಜೋಗ ಟೂರ್ ಪ್ಯಾಕೇಜ್, ದರದ ವಿವರ