ಮಾಗಡಿ (ಬೆಂಗಳೂರು ದಕ್ಷಿಣ ಜಿಲ್ಲೆ): ಮಾಗಡಿ ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅಗತ್ಯವಿರುವ ಟೆಂಡರ್ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿ ಬುಧವಾರ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಹಾಗೂ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದು ಇತಿಹಾಸ ಪುಟಕ್ಕೆ ಸೇರುವಂತಹ ಯೋಜನೆ. ಅಧಿಕಾರದಲ್ಲಿರುವಾಗ ಸಾಕ್ಷಿಗುಡ್ಡೆಗಳಾಗಿ ಉಳಿಯುವ ಕೆಲಸ ಮಾಡಬೇಕು” ಎಂದರು.
115 ಕಿ.ಮೀ ಲಿಫ್ಟ್ ಮೂಲಕ ನೀರಾವರಿ: ಡಿಕೆ ಶಿವಕುಮಾರ್ ವಿವರಿಸಿದಂತೆ, ಸತ್ತೇಗಾಲದಿಂದ ಮಾಗಡಿ ತಾಲೂಕಿನವರೆಗೆ ಒಟ್ಟು 115 ಕಿ.ಮೀ ದೂರಕ್ಕೆ 160 ಎಚ್.ಪಿ ಪಂಪ್ ಮೂಲಕ ನೀರನ್ನು ಎತ್ತಿ ಹರಿಸಲಾಗುತ್ತಿದೆ. ಸತ್ತೇಗಾಲದಿಂದ ಇಗ್ಗಲೂರು – 26 ಕಿ.ಮೀ, ಇಗ್ಗಲೂರಿನಿಂದ ಮೊಗೇನಹಳ್ಳಿ – 58 ಕಿ.ಮೀ, ಮೊಗೇನಹಳ್ಳಿಯಿಂದ ಕಣ್ವ – 6 ಕಿ.ಮೀ, ಕಣ್ವದಿಂದ ವೈ.ಜಿ. ಗುಡ್ಡ – 25 ಕಿ.ಮೀ. ಈ ಮೂಲಕ ಮಾಗಡಿ ಹಾಗೂ ಕುಣಿಗಲ್ ತಾಲೂಕಿನ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಉದ್ದೇಶವಾಗಿದೆ.
1000 ಕೋಟಿಗೂ ಅಧಿಕ ಅನುದಾನ: ಮಾಗಡಿ ಹಾಗೂ ಕುಣಿಗಲ್ ಕ್ಷೇತ್ರಗಳ ನೀರಾವರಿ ಅಭಿವೃದ್ಧಿಗಾಗಿ 1000 ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟಿರುವುದಾಗಿ ಅವರು ತಿಳಿಸಿದರು. ಈ ಯೋಜನೆಗಳಿಂದ ರೈತರಿಗೆ ಶಾಶ್ವತ ನೆರವು ಸಿಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕುಣಿಗಲ್ ಶಾಸಕ ರಂಗನಾಥ್ ಹಾಗೂ ಡಿ.ಕೆ. ಸುರೇಶ್ ಉಪಸ್ಥಿತರಿದ್ದರು.
ರಾಜಕೀಯ ಟೀಕೆ: ಈ ವೇಳೆ ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಟೀಕಿಸಿದ ಡಿಕೆ ಶಿವಕುಮಾರ್, “ಜನರಿಂದ ಮತ ಪಡೆದು ರಾಜಕಾರಣ ಮಾಡುವುದು ಮುಖ್ಯವಲ್ಲ, ಜನರ ಬದುಕಿನಲ್ಲಿ ಬದಲಾವಣೆ ತರಬೇಕು. ನಮ್ಮ ಕೆಲಸ ನೋಡಿ ಕೆಲವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಸರ್ಕಾರದ ಮೂಲಗಳ ಪ್ರಕಾರ, ಯೋಜನೆಗೆ ಸಂಬಂಧಿಸಿದಂತೆ ಮೊದಲ ಹಂತದ ಪೈಪ್‌ಲೈನ್ ಕಾಮಗಾರಿ ಮುಂದಿನ ತಿಂಗಳೊಳಗೆ ಆರಂಭವಾಗುವ ಸಾಧ್ಯತೆ ಇದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮಳೆಗಾಲದ ಮೊದಲು ಪ್ರಮುಖ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಇದೇ ವೇಳೆ ಎತ್ತಿನಹೊಳೆ ಯೋಜನೆಯಿಂದ ಹೆಚ್ಚುವರಿ ನೀರು ಒದಗಿಸಲು ತಾಂತ್ರಿಕ ಸಮೀಕ್ಷೆಯೂ ನಡೆಯುತ್ತಿದೆ.






















