ಬಿಡದಿ ಟೌನ್ ಶಿಪ್ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಜೆಎಂಸಿ ಮಾಡಲು ತೆರಳುತ್ತಿದ್ದ ಅಧಿಕಾರಿಗಳ ಕಾರುಗಳನ್ನು ರೈತರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಗುರುವಾರ ಬೈರಮಂಗಲ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಬೈರಮಂಗಲ ವೃತ್ತದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಬೆಳಗ್ಗೆ ಅದೇ ಮಾರ್ಗದಲ್ಲಿ ಅಧಿಕಾರಿಗಳು ಕಾರುಗಳಲ್ಲಿ ಜೆಎಂಸಿ ಮಾಡಲು ಕಂಚುಗಾರನಹಳ್ಳಿ ಭಾಗದ ಗ್ರಾಮಗಳಿಗೆ ತೆರಳುತ್ತಿದ್ದರು. ಇದನ್ನು ಗಮನಿಸಿದ ರೈತರು ಅಧಿಕಾರಿಗಳಿದ್ದ ಕಾರುಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು.
ರೈತರ ಅನುಮತಿ ಪಡೆಯದೆ ಜೆಎಂಸಿ ಮಾಡುವುದು ಸರಿಯಲ್ಲ. ನಿಮಗೆ ಜೆಎಂಸಿ ಮಾಡಿಸಲು ಅಧಿಕಾರ ನೀಡಿದವರು ಯಾರು?. ಆದೇಶ ಪತ್ರವಿದ್ದರೆ ತೋರಿಸಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರು ಪ್ರಯೋಜನ ಆಗಲಿಲ್ಲ. ಪೊಲೀಸ್ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟ ಉಂಟಾಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವಾರಣ ನಿರ್ಮಾಣವಾಯಿತು.
ಕೊನೆಗೆ ವೃತ್ತ ನಿರೀಕ್ಷಕ ಶಂಕರ್ ನಾಯಕ್ ಜಿಲ್ಲಾಧಿಕಾರಿಗಳು ರೈತರ ಸಭೆ ಕರೆದು ಚರ್ಚೆ ನಡೆಸುತ್ತಾರೆ ಎಂದು ಹೇಳಿದರು. ಆಗ ರೈತರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದರು. ರೈತರ ಪ್ರತಿಭಟನೆ ವಿಕೋಪಕ್ಕೆ ತಿರುಗಿದಾಗ ಅಧಿಕಾರಿಗಳು ಜೆಎಂಸಿ ಮಾಡದೆ ವಾಪಸ್ಸಾದರು.