Home Advertisement
Home ನಮ್ಮ ಜಿಲ್ಲೆ ರಾಯಚೂರು ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಯಚೂರು ಬಂದ್‌ಗೆ ಭಾರಿ ಸ್ಪಂದನೆ

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಯಚೂರು ಬಂದ್‌ಗೆ ಭಾರಿ ಸ್ಪಂದನೆ

0
61

ಒಳ ಮೀಸಲು ಜಾರಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ ತೀವ್ರ – ಬಂದ್‌ಗೆ ಭಾರಿ ಬೆಂಬಲ

ರಾಯಚೂರು : ಪರಿಶಿಷ್ಟ ಜಾತಿಯ ಜನರಿಗೆ ಒಳ ಮೀಸಲಾತಿ ನಿಗದಿ ಮಾಡಿ ಸರ್ಕಾರಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳು ಕರೆ ನೀಡಿದ ರಾಯಚೂರು ಬಂದ್‌ಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.

ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಒಳಮೀಸಲಾತಿ ಜಾರಿ ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಶ್ನೆ : ರಾಜ್ಯ ಸರ್ಕಾರ ಸುಮಾರು 56,432 ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಲು ನಿರ್ಧರಿಸಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಟ್ಟು ಮೀಸಲಾತಿ ಶೇ.50 ಮೀರದಂತೆ ನೇಮಕಾತಿ ನಡೆಸುವುದಾಗಿ ಸರ್ಕಾರ ಹೇಳಿದೆ.
ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ನಿಗದಿಪಡಿಸದೇ ನೇಮಕಾತಿ ನಡೆಸಿದರೆ ಮಾದಿಗ ಸಮುದಾಯದ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗಲಿದೆ ಎಂದು ಹೋರಾಟಗಾರರು ಆರೋಪಿಸಿದರು.

ಒಳ ಮೀಸಲಾತಿ ಕಾಯ್ದೆ ಜಾರಿ ಮಾಡಲಿ: ಎಸ್ಸಿ-ಎಸ್ಟಿ ಸಮುದಾಯಗಳಿಗೆ ಒಳ ಮೀಸಲಾತಿ ನಿಗದಿಪಡಿಸುವ ಕಾಯ್ದೆಗೆ ಈಗಾಗಲೇ ರಾಜ್ಯಪಾಲರ ಅಂಕಿತ ದೊರೆತಿದೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿಯೇ ಒಳ ಮೀಸಲಾತಿ ಅನ್ವಯಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿದ್ದು, ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ನಗರದಲ್ಲಿ ಸಂಪೂರ್ಣ ಬಂದ್: ಹೋರಾಟದ ಭಾಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಸಂಚರಿಸಲಿಲ್ಲ. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಮಧ್ಯದಲ್ಲೇ ಟೆಂಟ್ ಹಾಕಿ ಧರಣಿ ನಡೆಸಲಾಯಿತು. ಕಿರಾಣಿ ಬಜಾರ್, ಬಟ್ಟೆ ಬಜಾರ್, ಸರಾಫ್ ಬಜಾರ್, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಪ್ರಮುಖ ವ್ಯಾಪಾರ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದವು.

ರಂಜಾನ್ ಹಿನ್ನೆಲೆಯಲ್ಲಿ ಕೆಲವು ವ್ಯಾಪಾರಿಗಳು ಆರಂಭದಲ್ಲಿ ಅಂಗಡಿಗಳನ್ನು ತೆರೆದರೂ, ನಂತರ ಹೋರಾಟಗಾರರ ಮನವಿ ಮೇರೆಗೆ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು.

ಸಂಚಾರ ಸ್ಥಗಿತ, ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಹಲವಾರು ರಸ್ತೆಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಒಳ ಮೀಸಲಾತಿ ಜಾರಿ ಮಾಡಿ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.