ರಾಹುಲ್ ಗಾಂಧಿ ಕಮಿಂಗ್ ಅಂಡ್ ಗೋಯಿಂಗ್ ಅಷ್ಟೇ

0
10

ಮೈಸೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು.

ವಿಶೇಷ ವಿಮಾನದಿಂದ ಇಳಿದ ರಾಹುಲ್‌ ಗಾಂಧಿ, ಸಿಎಂ ಹಾಗೂ ಇತರರಿಂದ ಹೂಗುಚ್ಛ ಪಡೆದು ಕೇವಲ ಎರಡೇ ನಿಮಿಷಕ್ಕೆ ಊಟಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ವಿಮಾನದಲ್ಲಿ ತೆರಳಿದರು.

ಕಮಿಂಗ್ ಅಂಡ್ ಗೋಯಿಂಗ್ ಅಷ್ಟೇ: ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ಮಾತುಕತೆ ಅಥವಾ ಸಭೆ ನಡೆದಿಲ್ಲ. ರಾಹುಲ್ ಗಾಂಧಿ ಬಂದರು, ಕಾರ್ಯಕ್ರಮಕ್ಕೆ ತೆರಳಿದರು. ಸಂಜೆ ವಾಪಸ್ ಬರುತ್ತಾರೆ. ಮತ್ತೆ ನಾನೇ ಬಿಳ್ಕೋಡುತ್ತೇನೆ. ಅನಂತರ ದೆಹಲಿಗೆ ತೆರಳುತ್ತಾರೆ. ರಾಹುಲ್ ಗಾಂಧಿ ಕಮಿಂಗ್ ಅಂಡ್ ಗೋಯಿಂಗ್ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಮನರೇಗಾ ಪುನರ್‌ಸ್ಥಾಪನೆ ಆಗುವವರೆಗೆ ಹೋರಾಟ ನಿಲ್ಲಲ್ಲ

ಯಾವ ಸಭೆಯೂ ಇಲ್ಲ- ಯಾವ ಮಾತುಕತೆ ಇಲ್ಲ: ಬೆಳಿಗ್ಗೆಯೂ ಯಾವುದೇ ಮಾತುಕತೆ ನಡೆದಿಲ್ಲ. ಇನ್ನೂ ಸಂಜೆಯೂ ಯಾವ ಮಾತುಕತೆಯೂ ಇರುವುದಿಲ್ಲ. ಸಂಜೆ ನಾನೇ ಬಂದು ಬಿಳ್ಕೋಡುತ್ತೇನೆ ಅಷ್ಟೇ ಎಂದು ಹೇಳಿದರು.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಅಧಿಕಾರ ಹಂಚಿಕೆ ವಿಚಾರ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಯಾವ ಸಮಸ್ಯೆಯೂ ಇಲ್ಲ. ಯಾರೋ ಶಾಸಕರು ಏನೋ ಗೊತ್ತಿಲ್ಲದೆ ಏನೋ ಹೇಳುತ್ತಾರೆ. ಅವರಿಗೆ ಏನು ಗೊತ್ತು ರೀ. ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ ಶಿವಕುಮಾರ್. ಡಿ.ಕೆ ಶಿವಕುಮಾರ್ ಏನಾದ್ರು ಮಾತನಾಡಿದ್ದರಾ ಇಲ್ಲ ನಾನೇನಾದರೂ ಮಾತನಾಡಿದ್ದೀನಾ. ಯಾರೋ ಮಾಹಿತಿ ಇಲ್ಲದ ಎಂಎಲ್‌ಎಗಳು ಹೇಳಿದ್ದನ್ನ ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ್ ಖರ್ಗೆ ಜೊತೆ ಮಾತನಾಡಿದ್ದೇನೆ. ಡಿ.ಕೆ. ಶಿವಕುಮಾರ್ ಜೊತೆಯಲ್ಲೂ ಮಾತನಾಡಿದ್ದೇನೆ. ಎಲ್ಲೂ ಯಾವತ್ತು ಯಾರ ಅಪಸ್ವರಗಳು ಇಲ್ಲ, ಯಾವ ಸಮಸ್ಯೆಗಳು ಇಲ್ಲ. ಏನೇ ತೀರ್ಮಾನಗಳಿದ್ದರು ಅದನ್ನ ಹೈಕಮಾಂಡ್ ಮಾಡುತ್ತದೆ. ಹೈ ಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿ.ಕೆ. ಶಿವಕುಮಾರ್ ಬದ್ಧ ಎಂದು ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದರು.

ಮಾರ್ಚ್‌ನಲ್ಲಿ ಬಜೆಟ್: ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ. ಅದಕ್ಕೆ ಎಲ್ಲಾ ತಯಾರಿಗಳು ನಡೆದಿದೆ. ಬಜೆಟ್‌ಗೂ ಮುನ್ನವೇ ಫೆಬ್ರವರಿ 13 ರಂದು ಹಾವೇರಿಯಲ್ಲಿ ಸರ್ಕಾರದ ಸಾಧನ ಸಮಾವೇಶವನ್ನ ಮಾಡಲಾಗುವುದು. ಈಗಾಗಲೇ ತಯಾರಿ ನಡೆಯುತ್ತಿದೆ ಎಂದು ಹೇಳಿದರು.

ಕುಮಾರಸ್ವಾಮಿಗೆ ಆರೋಗ್ಯ ಸುಧಾರಿಸಲಿ: ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ಸರಿ ಇಲ್ಲ ಎಂದು ಕೇಳಿದೆ. ಈಗ ಅವರು ಹುಷಾರಾಗಿದ್ದಾರೆ. ಕುಮಾರಸ್ವಾಮಿ ಏನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ಮಾಧ್ಯಮದವರು ಹಾವಭಾವ ನೋಡಿ ಮಾತಿನ ಏರಿಳಿತ ನೋಡಿ ಹೇಳುತ್ತಿದ್ದೀರಾ. ಆ ರೀತಿಯಾಗಿ ಹಾವಭಾವದ ಮೇಲೆ ಎಲ್ಲಾ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪಾಲಿಕೆ ಚುನಾವಣೆ: ಪಾಲಿಕೆ ಚುನಾವಣೆ ನಡೆಸಲು ಸಿದ್ಧರಾಗಿದ್ದೇವೆ. ಬಿಜೆಪಿ ಜೆಡಿಎಸ್ ಒಂದಾಗಿ ಚುನಾವಣೆ ನಡೆಸಿದರೂ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ. ಇರುವುದು ಎರಡೇ, ಒಂದು ಕಾಂಗ್ರೆಸ್ ಮತ ಮತ್ತೊಂದು ಕಾಂಗ್ರೆಸ್ ವಿರೋಧಿ ಮತ. ಇಲ್ಲಿ ಜೆಡಿಎಸ್ ಮತ ಬೇರೆ ಬಿಜೆಪಿ ಮತ ಬೇರೆ ಎಂದಿರುವುದಿಲ್ಲ. ಎರಡು ಪಕ್ಷದ ಒಂದೇ ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆಸ್ ಸಮಸ್ಯೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಏಕೆಂದರೆ ಮತದಾರರು ಪಕ್ಷದ ಪರವಾಗಿದ್ದಾರೆ ಎಂದರು.

Previous articleಮನರೇಗಾ ಪುನರ್‌ಸ್ಥಾಪನೆ ಆಗುವವರೆಗೆ ಹೋರಾಟ ನಿಲ್ಲಲ್ಲ