ಮೈಸೂರು: ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಹಾಗೂ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ನಮ್ಮ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಆತಿಥ್ಯ ವಹಿಸಲು ನನಗೆ ಸಿಕ್ಕ ಅವಕಾಶವು ನಿಜಕ್ಕೂ ಅಪಾರ ಸಂತೋಷ ಮತ್ತು ಹೆಮ್ಮೆ ತಂದುಕೊಟ್ಟಿದೆ. ಆಹ್ವಾನವನ್ನು ಸ್ವೀಕರಿಸಿ ಆಗಮಿಸಿರುವ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಸೋಮವಾರ (ಸೆಪ್ಟಂಬರ್ 1)ದಂದು ಮೈಸೂರಿನ ಮಾನಸಗಂಗೋತ್ರಿಯ ನೈಮಿಶಾಮ್ ಕ್ಯಾಂಪಸ್‌ನಲ್ಲಿ ಆಯೋಜಿಸಿದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮಂಗಳವಾರ ಬೆಳಗ್ಗೆ ಅರಮನೆಗೆ ಭೇಟಿ ನೀಡಿ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಕುಟುಂಬದವರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸಿದರು
ಈ ವಿಶೇಷ ಸಂದರ್ಭದಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆ ವೈವಿಧ್ಯಮಯವಾಗಿತ್ತು. ಉಪಹಾರದ ಮೆನುವಿನಲ್ಲಿ ಎಳನೀರು, ಕಿವಿ, ಪ್ಲಮ್, ಪಪ್ಪಾಯಿ ಸೇರಿದಂತೆ ಹಲವಾರು ಹಣ್ಣುಗಳ ಜೊತೆಗೆ ಮೈಸೂರಿನ ಸಾಂಪ್ರದಾಯಿಕ ಭಕ್ಷ್ಯಗಳಾದ ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬರ್, ಚಟ್ನಿ, ಶ್ಯಾವಿಗೆ ಉಪ್ಪಿಟ್ಟು, ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾ ಸೇರಿದ್ದವು. ಜೊತೆಗೆ ರಾಗಿ ಮತ್ತು ಗೋಧಿ ಬಿಸ್ಕೆಟ್‌ಗಳು, ಬಿಸಿ ಚಹಾ ಮತ್ತು ಕಾಫಿಯೂ ಕೂಡಾ ಅತಿಥಿಗಳಿಗಾಗಿ ಸಿದ್ಧವಾಗಿತ್ತು.
ಈ ಎಲ್ಲಾ ಪದಾರ್ಥಗಳನ್ನು ರಾಷ್ಟ್ರಪತಿಗಳ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ವಿಶೇಷ ಕಾಳಜಿಯಿಂದ ತಯಾರಿಸಲಾಗಿತ್ತು. ರಾಷ್ಟ್ರಪತಿಗಳು ಉಪಹಾರದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದರು. ಬಳಿಕ ಅವರು ಅರಮನೆಯ ಕೆಲವು ಪ್ರಮುಖ ಭಾಗಗಳನ್ನು ವೀಕ್ಷಿಸಿ ಸಂತೋಷ ಹಂಚಿಕೊಂಡರು.
“ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಆತಿಥ್ಯ ವಹಿಸುವ ಅವಕಾಶ ನನಗೆ ಸಿಕ್ಕಿರುವುದು ಅಪಾರ ಹೆಮ್ಮೆ ಹಾಗೂ ನೆನಪಿನಲ್ಲಿ ಉಳಿಯುವ ಸಂತೋಷದ ಕ್ಷಣವಾಗಿಯೇ ಉಳಿಯಲಿದೆ” ಎಂದು ರಾಜವಂಶಸ್ಥೆ ಪ್ರಮೋದಾದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.