ಮೈಸೂರು: ನಾನು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಹಿರಿಯರ ಮೇಲೆ ನಂಬಿಕೆ ಇದೆ. ಐದು ವರ್ಷ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತೇನೆ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅದು ಸಂಪೂರ್ಣವಾಗಿ ಅಳಿಯುವವರೆಗೂ ಮತ್ತು ಎಲ್ಲರಿಗೂ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ. ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ತೀವ್ರಗೊಂಡ ತನಿಖೆ
ದಾಖಲೆ ಕಾಕತಾಳೀಯ: ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಆಡಳಿತಾವಧಿಯ ದಾಖಲೆಯನ್ನು ಸರಿಗಟ್ಟಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ದಾಖಲೆ ಮುರಿಯಬೇಕೆಂಬ ಉದ್ದೇಶದಿಂದ ನಾನು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಸಂಭವಿಸಿದೆ. ದೇವರಾಜ ಅರಸು ಅವರು ಎಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನೂ ನನಗೆ ಪೂರ್ವಭಾವಿಯಾಗಿ ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ಅವರ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಿದೆ ಎಂದರು.
ಹಳ್ಳಿಯವರ ಸಹಜ ಆಹಾರ ಪದ್ಧತಿಗೆ ಈಗ ಸ್ವಲ್ಪ ಹೆಚ್ಚು ಪ್ರಚಾರ ಸಿಗುತ್ತಿದೆ : ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ನಾಟಿ ಕೋಳಿ ಅಡುಗೆ ಮಾಡುವುದು ರೂಢಿ. ನಾನೂ ಹಳ್ಳಿಯವನು ಆಗಿರುವುದರಿಂದ ನಾಟಿ ಕೋಳಿ, ರಾಗಿ ಮುದ್ದೆ ತಿನ್ನುತ್ತಲೇ ಬೆಳೆದವನು. ಇದು ಹಳ್ಳಿಯವರ ಸಹಜ ಆಹಾರ ಪದ್ಧತಿ. ನಾನು ಮುಖ್ಯಮಂತ್ರಿಯಾಗಿರುವುದರಿಂದ ಇದಕ್ಕೆ ಸ್ವಲ್ಪ ಹೆಚ್ಚು ಪ್ರಚಾರ ಸಿಗುತ್ತಿದೆ ಎಂದರು.
ಇದನ್ನೂ ಓದಿ: ಗುಂಡು ಹಾರಿಸಿದವರು ನನ್ನ ಕಡೆಯವರಾಗಿದ್ರೇ, ಇಷ್ಟೊತ್ತಿಗೆ ಶರಣಾಗುತ್ತಿದ್ದೆ
ಜನರು ನೀಡಿದ ಅವಕಾಶಗಳ ಫಲ: ರಾಜಕಾರಣದ ಜೀವನ ತೃಪ್ತಿ ತಂದಿದೆ ಎಂದು ಹೇಳಿದ ಮುಖ್ಯಮಂತ್ರಿ, ಇಷ್ಟು ವರ್ಷಗಳ ರಾಜಕೀಯ ಜೀವನ ಖುಷಿ ನೀಡಿದೆ. ಜನರ ಕೆಲಸ ಮಾಡುವುದು ಸಂತೋಷದ ಸಂಗತಿ. ರಾಜಕಾರಣ ಎಂದರೆ ಬಡವರು, ದಲಿತರು ಹಾಗೂ ಹಿಂದುಳಿದವರ ಪರವಾಗಿ ಕೆಲಸ ಮಾಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಆದರೆ ಶಾಸಕ, ಸಚಿವ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು. ಈ ಎಲ್ಲವೂ ಜನರು ನೀಡಿದ ಅವಕಾಶಗಳ ಫಲ ಎಂದು ಹೇಳಿದರು.
ದಾಖಲೆ ಬರೆದವರು ಇಬ್ಬರೂ ಮೈಸೂರಿನವರೇ: ದೇವರಾಜ ಅರಸು ಹಾಗೂ ನಾನು ಇಬ್ಬರೂ ಮೈಸೂರಿನವರೇ ಆಗಿದ್ದು, ದೀರ್ಘಾವಧಿಗೆ ಮುಖ್ಯಮಂತ್ರಿಗಳಾಗಿದ್ದೇವೆ. ಆದರೆ ನಮ್ಮ ಕಾಲಘಟ್ಟಗಳು ಬೇರೆ ಬೇರೆ. ದೇವರಾಜ ಅರಸು ಅವರು 1972ರಿಂದ 1980ರವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
ಬಜೆಟ್ ನಲ್ಲಿ ವಿಶೇಷ ಘೋಷಣೆ – ಕಾದು ನೋಡಿ: ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಘೋಷಣೆಗಳಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್ ಮಂಡನೆ ಆಗುವವರೆಗೂ ಕಾದು ನೋಡಿ ಎಂದು ನುಡಿದರು.
ಬಳ್ಳಾರಿ ಘಟನೆ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚೆ: ಬಳ್ಳಾರಿ ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ: ಹರಿಯಿತು ನೆತ್ತರು: ವಿವಾಹಿತ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ
ಎಚ್. ಡಿ ಕುಮಾರಸ್ವಾಮಿ ರಾಜಕೀಯವಾಗಿ ಮಾತನಾಡುತ್ತಾರೆ: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕಾನೂನಿನ ಆಧಾರದಲ್ಲಿ ಮಾತನಾಡದೇ ರಾಜಕೀಯವಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು.
ಸಂಪುಟ ಪುನರ್ ರಚನೆ: ನಿನ್ನೆ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ನಡೆದ ಭೇಟಿಯ ಬಗ್ಗೆ ಮಾತನಾಡಿದ ಅವರು, ವಯನಾಡಿನಿಂದ ಬೆಂಗಳೂರು ಮೂಲಕ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಮೈಸೂರಿನಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಲಾಗಿದೆ ಎಂದರು. ಸಂಪುಟ ಪುನರ್ ರಚನೆ ಕುರಿತು ದೆಹಲಿಯಿಂದ ಕರೆ ಬಂದಾಗ ಚರ್ಚೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.






















