ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು, ಸ್ಮಾರ್ಟ್ ಸಿಟಿ ಶಿವಮೊಗ್ಗಕ್ಕೆ ಸಂತಸದ ಸುದ್ದಿಯೊಂದಿದೆ. ಜನರು ಇನ್ನು ಮುಂದೆ ನಗರದಲ್ಲಿ ಯುದ್ಧ ವಿಮಾನವನ್ನು ವೀಕ್ಷಣೆ ಮಾಡಬಹುದು. ಭಾರತೀಯ ಸೇನೆಯಲ್ಲಿ ಬಳಕೆ ಮಾಡುತ್ತಿದ್ದ ಯುದ್ಧ ಟ್ಯಾಂಕರ್ ಸಹ ಈಗಾಗಲೇ ನಗರದಲ್ಲಿದೆ.
ಸಂಸದ ಬಿ.ವೈ.ರಾಘವೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. ಸಂಸದರ ನಿರಂತರ ಪ್ರಯತ್ನಕ್ಕೆ ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಭಾರತೀಯ ಸೇನೆಯ ಕಿರಣ್ ಎಮ್ ನಿಷ್ಕ್ರಿಯ ಯುದ್ಧ ವಿಮಾನ ಸೋಮವಾರ ಶಿವಮೊಗ್ಗಕ್ಕೆ ಆಗಮಿಸಲಿದೆ.
ಭಾರತೀಯ ಸೇನೆಯ ಯುದ್ಧ ವಿಮಾನ ನಿಷ್ಕ್ರಿಯಗೊಂಡಿದೆ. ಆದರೆ ಅದನ್ನು ಪಡೆಯಲು ಹೋರಾಟ, ಪರಿಶ್ರಮವಿದೆ. ಇಂತಹ ಒಂದು ಯುದ್ಧ ಪಾರಿತೋಷಕ ಈಗ ಶಿವಮೊಗ್ಗ ನಗರದಲ್ಲಿ ಜನರಿಗೆ ವೀಕ್ಷಣೆಗೆ ಲಭ್ಯವಾಗಲಿದೆ. ಇದೊಂದು ಗರ್ವ, ಅಭಿಮಾನ ಮತ್ತು ಹೆಮ್ಮೆಯ ಸಂಗತಿ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸಂಸದರು ಭಾರತೀಯ ವಾಯುಪಡೆಯಲ್ಲಿದ್ದ ಯೋಧರಿಗೆ ತರಬೇತಿ ನೀಡಲು ಬಳಕೆ ಮಾಡಲಾದ, ಯುದ್ಧ ತರಬೇತಿ ವಿಮಾನವನ್ನು ಶಿವಮೊಗ್ಗಕ್ಕೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಬಿ.ವೈ.ರಾಘವೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದ ಫ್ರೀಡಂಪಾರ್ಕ್‌ನಲ್ಲಿ ಈ ಯುದ್ಧ ವಿಮಾನವನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಈಗಾಗಲೇ ಈ ಕಾರ್ಯಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ. ಜಾಗವನ್ನು ಸಹ ಶಿವಮೊಗ್ಗ ನಗರ ಶಾಸಕರ ನೇತೃತ್ವದಲ್ಲಿ ಅಂತಿಮಗೊಳಿಸಲಾಗಿದೆ.
ಕಿರಣ್ ಯುದ್ಧ ವಿಮಾನದ ವಿಶೇಷತೆಗಳು: ಈ ಯುದ್ಧ ವಿಮಾನದ ಹೆಸರು HAL HJT-16 Kiran. 1968ರಲ್ಲಿ ಇದು ಸೇವೆಗೆ ಸೇರ್ಪಡೆಗೊಂಡಿತು. 1964ರ ಸೆಪ್ಟೆಂಬರ್ 4ರಂದು ಮೊದಲ ಬಾರಿಗೆ ಹಾರಾಟವನ್ನು ನಡೆಸಿತು. ಬೆಂಗಳೂರಿನ ಹೆಚ್‌ಎಎಲ್ ಇದನ್ನು ನಿರ್ಮಾಣ ಮಾಡಿದೆ. ಭಾರತೀಯ ವಾಯುಪಡೆಯಲ್ಲಿ ಇದು 1964-1989ರ ತನಕ ಕಾರ್ಯ ನಿರ್ವಹಣೆ ಮಾಡಿದೆ.
ಕಿರಣ್ ವಿಮಾನ 10.6 ಮೀಟರ್ ಉದ್ದವಿದೆ. ರೆಕ್ಕೆಗಳ ಅಗಲ 10.7 ಮೀಟರ್. ಬಾಲವು 3.9 ಮೀಟರ್ ಇದ್ದು, ಗಾಲಿಗಳ ತಳಪಾಯವು 3.9 ಮೀಟರ್ ಇದೆ. 3.635 ಮೀಟರ್ ಎತ್ತರದ ಈ ವಿಮಾನವು ತೈಲ ಭರ್ತಿಯಾದ ನಂತರ 3488 ಕೆಜಿ ತೂಕವನ್ನು ಹೊಂದಿರುತ್ತದೆ ಎಂದು ತಾಂತ್ರಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
2 ಆಸನವನ್ನು ಹೊಂದಿದ್ದ ವಿಮಾನ ಗರಿಷ್ಠ 4082 ಅಡಿಗಳಷ್ಟು ಎತ್ತರದಲ್ಲಿ ಹಾರಾಟವನ್ನು ನಡೆಸುತ್ತಿತ್ತು. ಗಂಟೆಗೆ 695 ಕಿ.ಮೀ.ವೇಗದಲ್ಲಿ ಚಲಿಸಬಲ್ಲ ವಿಮಾನವು 19 ನಿಮಿಷಗಳಲ್ಲಿ 3 ಸಾವಿರದಿಂದ 30 ಸಾವಿರ ಅಡಿಗಳಷ್ಟು ಎತ್ತರಕ್ಕೆ ಕ್ರಮಿಸುವ ಸಾಮರ್ಥ್ಯ ಹೊಂದಿತ್ತು.
ಭಾರತೀಯ ವಾಯುಪಡೆ ನಿಯಮಗಳ ಪ್ರಕಾರ ಯುದ್ಧ ವಿಮಾನ, ತರಬೇತಿ ನೀಡುವ ವಿಮಾನವನ್ನು ನಿಗದಿತ ಅವಧಿ ಬಳಿಕ ನಿಷ್ಕ್ರಿಯ ಮಾಡಲಾಗುತ್ತದೆ. ಆದರೆ ಅಂತಹ ವಿಮಾನಗಳನ್ನು ಗುಜರಿಗೆ ಹಾಕುವುದಿಲ್ಲ. ದೇಶದ ಹೆಮ್ಮೆ, ಸ್ವಾಭಿಮಾನದ ಪ್ರತೀಕವಾದ ಅವುಗಳ ಗೌರವ ಕಾಪಾಡಲು ಆಸಕ್ತ ಸರ್ಕಾರಿ, ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಗೆ ‘ಯುದ್ಧ ಪಾರಿತೋಷಕ’ ಎಂದು ನೀಡಲಾಗುತ್ತದೆ. ಇದಕ್ಕೆ ಸಹ ಹಲವು ನಿಯಮಗಳಿವೆ.
ಈಗ ಇಂತಹ ‘ಯುದ್ಧ ಪಾರಿತೋಷಕ’ ಶಿವಮೊಗ್ಗಕ್ಕೆ ಸಿಕ್ಕಿದೆ. ಇದನ್ನು ನಗರದಲ್ಲಿ ಇಟ್ಟು ಯುವಜನತೆಗೆ ಇತಿಹಾಸ, ನಮ್ಮ ದೇಶದ ಸಶಸ್ತ್ರ ಪಡೆಗಳ ಬಗ್ಗೆ ಆಸಕ್ತಿ ಮೂಡಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ. ಬೆಂಗಳೂರು ನಗರದಿಂದ ಲಾರಿಯಲ್ಲಿ ವಿಮಾನವನ್ನು ಶಿವಮೊಗ್ಗಕ್ಕೆ ತರಲಾಗುತ್ತಿದೆ. ಎಂದಿನಿಂದ ಇದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ? ಎಂದು ಇನ್ನೂ ಮಾಹಿತಿ ನೀಡಿಲ್ಲ.