ಕೊಪ್ಪಳ: ಲಿಂಗಾಯತ ಧರ್ಮ ಅಲ್ಲ. ಹಿಂದೂ ಕೂಡ ಒಂದು ಸಂಸ್ಕೃತಿಯಾಗಿದೆ. ಶರಣತತ್ವ, ಲಿಂಗಾಯತ ಸೇರಿ ಧರ್ಮ ಅಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಲಿಂಗಾಯತ ತತ್ವ ಆಧಾರಿತ ಚಳವಳಿಯಾಗಿದ್ದು, ಹಿಂದೂ ಕೂಡಾ ಸಂಸ್ಕೃತಿನೇ. ವೀರಶೈವ ಲಿಂಗಾಯತ, ಹಿಂದೂ ಲಿಂಗಾಯತ ವಿಚಾರದಲ್ಲಿ ಗೊಂದಲ ಇದೆ ಎಂದರು.
ಕ್ರಿಶ್ಚಿಯನ್ ಜಾತಿ ಕಾಲಂ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದುಳಿದ ವರ್ಗದ ಶಾಶ್ವತ ಆಯೋಗದವರು ಮತಾಂತರವಾದ ಕ್ರಿಶ್ಚಿಯನ್‌ರಿಗಾಗಿ ಜಾತಿಗಳ ಕಾಲಂ ಮಾಡಿದ್ದಾರೆ. ಬಿಜೆಪಿಯವರಿಗೆ ಕಾನೂನು ಗೊತ್ತಿಲ್ಲ. ಇದರ ಬಗ್ಗೆ ಸೋನಿಯಾ ಗಾಂಧಿಯವರು ಏನೂ ಹೇಳಿಲ್ಲ. ಅವರ ಓಲೈಕೆಯ ಅವಶ್ಯಕತೆ ಇಲ್ಲ. ಇದನ್ನು ಈಗಾಗಲೇ ಸಿಎಂ ಅವರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಸಾಬರ ಸರ್ಕಾರ, ಔರಂಗಜೇಬ್ ಸರ್ಕಾರ ಎಂದು ಯತ್ನಾಳ ಹೇಳಿಕೆಗೆ ಉತ್ತರಿಸಿ, ಅಂತಹವರ ಬಗ್ಗೆ ಮಾತಾಡೋದು ಸೂಕ್ತಾನಾ..?. ಹಗುರವಾಗಿ ಮಾತನಾಡಬಾರದು. ನಮ್ಮ ಸರ್ಕಾರ ಕರ್ನಾಟಕದ ಏಳು ಕೋಟಿ ಜನರ ಸರ್ಕಾರ. ಸುಮ್ನೆ ಸಾಬರು, ಮುಸಲ್ಮಾನರು ಎನ್ನುವ ಯತ್ನಾಳಗೆ ಬೇರೆ ದಂಧೆನೆ ಇಲ್ವಾ? ಅವರು ಎಂದೂ ಅಧಿಕಾರಕ್ಕೆ ಬರುವುದೂ ಇಲ್ಲ ಎಂದು ಹೇಳಿದರು.
ನನಗೆ ಧರ್ಮ ಇಲ್ಲ, ಧರ್ಮ ಬರೆಸಲ್ಲ: ನನಗೆ ಧರ್ಮ ಇಲ್ಲ, ಜಾತಿ ಕಾಲಂನಲ್ಲಿ ನಾನು ಧರ್ಮ ಬರೆಸಲ್ಲ. ನನ್ನ ಹೆಂಡತಿ ಬರೆಸಿದರೆ ನಾನು ಏನು ಮಾಡಲಿ? ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈಗಾಗಲೇ ವೀರಶೈವ ಮಹಾಸಭಾದವರು ಕೆಲ ವಿಷಯ ಸ್ಪಷ್ಟಪಡಿಸಿದ್ದಾರೆ ಎಂದು ರಾಯರೆಡ್ಡಿ ನುಡಿದರು.