Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಕೊಪ್ಪಳ ಬಂದ್: ಒಂದು ವರ್ಷದ ಹೋರಾಟ ನಿರ್ಣಾಯಕ ಹಂತಕ್ಕೆ

ಕೊಪ್ಪಳ ಬಂದ್: ಒಂದು ವರ್ಷದ ಹೋರಾಟ ನಿರ್ಣಾಯಕ ಹಂತಕ್ಕೆ

0
54

ಗವಿಮಠದಿಂದ ಬೃಹತ್ ರ‍್ಯಾಲಿ: ಶಾಲೆಗಳಿಗೆ ರಜೆ, ಪಿಜಿ ಪರೀಕ್ಷೆ ಮುಂದೂಡಿಕೆ – ಬಂದ್‌ಗೆ ವ್ಯಾಪಕ ಬೆಂಬಲ

ಕೊಪ್ಪಳ: ಜಿಲ್ಲೆಯ ಪರಿಸರ ಮತ್ತು ಜನಾರೋಗ್ಯಕ್ಕೆ ಅಪಾಯಕಾರಿಯೆಂದು ಆರೋಪಿಸಿ Baldota Groupಗೆ ಸೇರಿದ ಎಕ್ಸ್-ಇಂಡಿಯಾ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಯ ವಿಸ್ತರಣೆ ವಿರುದ್ಧ ನಡೆಯುತ್ತಿರುವ ಹೋರಾಟ ಇದೀಗ ತೀವ್ರಗತಿಗೆ ತಲುಪಿದೆ. ಹೋರಾಟಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ‘ಸ್ವಯಂಪ್ರೇರಿತ ಬಂದ್’ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ.

ಶಾಲೆಗಳಿಗೆ ರಜೆ, ಪರೀಕ್ಷೆ ಮುಂದೂಡಿಕೆ: ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಶಾಲೆಗಳ ಒಕ್ಕೂಟವು ಕೊಪ್ಪಳ ಜಿಲ್ಲಾ ಕೇಂದ್ರದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಯಂತೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ. ಇನ್ನು ಕೊಪ್ಪಳ ವಿಶ್ವವಿದ್ಯಾಲಯವು ಸ್ನಾತಕೋತ್ತರ (PG) ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಅಧಿಕೃತ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಜ್ವರ: ಕರ್ನಾಟಕ–ಜಮ್ಮು ಕಾಶ್ಮೀರ ಮುಖಾಮುಖಿ

ಒಂದು ವರ್ಷದ ಹೋರಾಟ: ಕಳೆದ ವರ್ಷ ಫೆಬ್ರವರಿ 24ರಂದು ಗವಿಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಕಾರ್ಖಾನೆಯನ್ನು ಶಾಶ್ವತವಾಗಿ ನಿಲ್ಲಿಸಲು ಜನಪ್ರತಿನಿಧಿಗಳಿಗೆ ಗಡುವು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಕಾರಣ, ಕಳೆದ 116 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನಿರಂತರ ಧರಣಿ ನಡೆಸುತ್ತಿದೆ. ಒಂದು ವರ್ಷದ ನೆನಪಿಗಾಗಿ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ.

ಬೃಹತ್ ಪ್ರತಿಭಟನಾ ರ‍್ಯಾಲಿ: ನಾಳೆ ಬೆಳಿಗ್ಗೆ 7 ಗಂಟೆಗೆ ಬೈಕ್ ಮತ್ತು ಆಟೋ ರ‍್ಯಾಲಿ ಮೂಲಕ ಬಂದ್‌ಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ಐತಿಹಾಸಿಕ ಗವಿಮಠದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಆರಂಭವಾಗಲಿದೆ. ಗಡಿಯಾರ ಕಂಬ, ಅಶೋಕ ವೃತ್ತ ಸೇರಿದಂತೆ ನಗರದ ಪ್ರಮುಖ ಮಾರ್ಗಗಳ ಮೂಲಕ ರ‍್ಯಾಲಿ ಸಾಗಿದ್ದು, ನಗರಸಭೆ ಮುಂಭಾಗದ ಪ್ರತಿಭಟನಾ ಸ್ಥಳದಲ್ಲಿ ಬಹಿರಂಗ ಸಭೆ ನಡೆಯಲಿದೆ.

ಇದನ್ನೂ ಓದಿ: ಹಂಪಿ ಕನ್ನಡ ವಿಶ್ವವಿದ್ಯಾಲಯ: 3 ಜನ ಸಾದಕರಿಗೆ ನಾಡೋಜ ಪ್ರಕಟ

ಗಣ್ಯರ ಬೆಂಬಲ: ಈ ಹೋರಾಟಕ್ಕೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು ಹಾಗೂ ಹಿರಿಯ ಪರಿಸರ ಹೋರಾಟಗಾರ ಎ.ಟಿ. ರಾಮಸ್ವಾಮಿ ಭಾಗವಹಿಸುವ ನಿರೀಕ್ಷೆಯಿದೆ. ಹೋರಾಟದ ಸಂಚಾಲಕ ಮಂಜುನಾಥ್ ಗೊಂಡಬಾಳ ಅವರು, “ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ನಮ್ಮ ಮೇಲಿದೆ. ಸೂಕ್ತ ಸಮಯದಲ್ಲಿ ಅವರು ನಮ್ಮೊಂದಿಗೆ ಬೀದಿಗಿಳಿಯುವ ವಿಶ್ವಾಸವಿದೆ,” ಎಂದು ತಿಳಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ತುರ್ತು ಸೇವೆಗಳು, ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ವ್ಯಾಪಾರಸ್ಥರು, ವಕೀಲರ ಸಂಘ ಮತ್ತು ವಿವಿಧ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿರುವುದರಿಂದ ಜಿಲ್ಲಾ ಕೇಂದ್ರ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಎಲ್ ಮೆಂಚೊ’ ಎನ್‌ಕೌಂಟರ್: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ – ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!

ಪರಿಸರ ಸಂರಕ್ಷಣೆ ಮತ್ತು ಜನಾರೋಗ್ಯದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಹೋರಾಟ ರಾಜ್ಯದ ಗಮನ ಸೆಳೆದಿದ್ದು, ಸರ್ಕಾರದ ಮುಂದಿನ ಕ್ರಮ ಏನೆಂಬುದರತ್ತ ಎಲ್ಲರ ದೃಷ್ಟಿ ನೆಟ್ಟಿದೆ.

Previous articleಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ
Next articleವೈದ್ಯಕೀಯ ಸೇವೆ ಬಂದ್: 2 ಹಂತದ ಮುಷ್ಕರ ಘೋಷಣೆ