ಕಲಬುರಗಿ: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಎಸ್‌ಸಿ ಒಳಮೀಸಲಾತಿ ಮಸೂದೆ ಶೀಘ್ರದಲ್ಲಿ ಜಾರಿಯಾಗಲಿದೆ, ಯಾವುದೇ ಅನುಮಾನ ಬೇಡ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದರು.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಕಳುಹಿಸಿ ಮಸೂದೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಕಿತ ಹಾಕದೆ ವಾಪಸ್ ಕಳುಹಿಸಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ. ಇನ್ನೂ ಸರ್ಕಾರದ ಕೈ ಸೇರಿಲ್ಲ. ರಾಜ್ಯಪಾಲರು ಏನು ಸ್ಪಷ್ಟನೆ ಕೇಳಿದ್ದಾರೆ ಎಂಬುದು ತಿಳಿದುಕೊಂಡು ಸರ್ಕಾರ ಸ್ಪಷ್ಟನೆ ನೀಡಿ ರಾಜ್ಯಪಾಲರಿಗೆ ಕಳುಹಿಸಲಿದೆ. ಆ ಬಳಿಕ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಲಿದ್ದಾರೆ ಎಂದರು.
ಈ ಮಸೂದೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಸಭೆ, ವಿಧಾನ ಪರಿಷತ್‌ನಲ್ಲೂ ವಿವಿಧ ಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ. ಈ ಮಸೂದೆಯಲ್ಲಿ ಯಾವ ಸಮುದಾಯಕ್ಕೂ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಕೇರಳ ಸರ್ಕಾರ ಕನ್ನಡಿಗರ ತಾಳ್ಮೆ ಪರೀಕ್ಷಿಸದಿರಲಿ
ಸಂಕ್ರಾಂತಿ ಬಳಿಕ ರಾಜ್ಯ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಸರ್ಕಾರ ಬದಲಾವಣೆ ಆಗುವ ಚಿಂತನೆಯೂ ಇಲ್ಲ. ನಮಗೆ ಹೈಕಮಾಂಡ್ ಇದೆ, ಅದು ಏನು ತೀರ್ಮಾನ ಮಾಡುತ್ತದೆ ಅದಕ್ಕೆ ನಾವೆಲ್ಲ ಬದ್ಧವಾಗಿದ್ದೇವೆ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ನಮಗೆ ಬಿಡಿ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ನಾವು ಹೈಕಮಾಂಡ್ ಮೇಲೆ ಬಿಟ್ಟಿದ್ದೇವೆ. ಸಿದ್ದರಾಮಯ್ಯನವರು ಸಿಎಂ ಆಗಿ ದೇವರಾಜು ಅರಸು ಅವರನ್ನು ಮೀರಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ವರ್ಗದವರಿಗೆ ಸಮಾನತೆ ತಂದಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಉಳಿಯುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ಸಿದ್ದರಾಮಯ್ಯ ಬದ್ಧರಾಗುತ್ತಾರೆ ಎಂದರು.
ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟದಲ್ಲಿ ಆಗುತ್ತಿರುವ ಕಳ್ಳಾಟ ಮತ್ತು ದುರುಪಯೋಗ ತಡೆಯಲು ಶೀಘ್ರದಲ್ಲಿ ರಾಜ್ಯದಲ್ಲಿ 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಇದನ್ನೂ ಓದಿ: ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು
ಈ ಇಂದಿರಾ ಕಿಟ್‌ನಲ್ಲಿ ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಒಳಗೊಳ್ಳಲಿದೆ. ಶೀಘ್ರದಲ್ಲಿ ಟೆಂಡರ್ ಕರೆದು ನ್ಯಾಯಬೆಲೆ ಅಂಗಡಿಗಳ ಮೂಲಕ ಇದೇ ತಿಂಗಳು ಅಥವಾ ಫೆಬ್ರವರಿ ತಿಂಗಳಲ್ಲಿ ವಿತರಣೆ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯನ್ನು ನಾವೇ ಖರೀದಿಸಿ ಪಡಿತರದಾರರಿಗೆ ನೀಡುವುದರ ಜೊತೆಗೆ ನಮ್ಮ ಪಾಲಿನ 5 ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರ ಕಿಟ್ ಹೆಸರಿನಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತದೆ ಎಂದರು. ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂದರು.























