ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಮತ್ತೆ ಚೊಂಬು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ದೂರದೃಷ್ಟಿ ಇಲ್ಲದ ಬರಿ ಹೇಳಿಕೆಗಳ ಬಜೆಟ್ ಆಗಿದೆ ಎಂದರು.
ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತದ ಬಜೆಟ್‌ವಾಗಿದೆ. ಕರ್ನಾಟಕ ಮತ್ತು ದಕ್ಷಿಣ ಭಾರತವನ್ನು ಮತ್ತೆ ನಿರ್ಲಕ್ಷಿಸಿದ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್: ಜಾಗತಿಕ ಅನಿಶ್ಚಿತತೆಯ ನಡುವೆ ಜಾಗರೂಕತೆಯ ಮಹತ್ವಾಕಾಂಕ್ಷಿ ಹೆಜ್ಜೆಗಳು
ವಿಕಸಿತ ಭಾರತದ ಸಂಕಲ್ಪ ಎನ್ನುವುದು ನಾಲಿಗೆ ಮೇಲಿನ ಮಾತಾಗಿದೆಯೇ ಹೊರತು ಕೃತಿಗಿಳಿಸಲು ಬೇಕಾದ ಯಾವುದೇ ಯೋಜನೆಗಳಿಲ್ಲ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣವನ್ನು ಓದಿದ್ದಾರೆ ಹೊರತು ರಾಜ್ಯಕ್ಕೆ ಏನು ಕೊಡುಗೆ ನೀಡದೆ ಮತ್ತೆ ದೊಡ್ಡ ಮಟ್ಟದ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್. ಕೇಂದ್ರದ ಬಜೆಟ್ ದೊಡ್ಡ ನಗರಗಳ ಕಾರ್ಪೊರೇಷನ್ ಬಜೆಟ್‌ಗಳಿಗಿಂತ ಮೇಲೆ ಹೋಗಿಲ್ಲ. ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ಯಥಾ ಪ್ರಕಾರ ಚೊಂಬು ಕೊಟ್ಟರು. ಕರ್ನಾಟಕ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೂ ಏನೂ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿಗೆ, ಬೆಂಗಳೂರು – ಹೈದರಾಬಾದ್ ಮತ್ತು ಬೆಂಗಳೂರು – ಚೆನ್ನೈ ಎರಡು ಹೈ ಸ್ಪೀಡ್ ರೈಲುಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆ ಎರಡರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ. ಅತಿ ಹೆಚ್ಚಿನ ಕಿಮೀ ನಮಗೆ ಸಂಚರಿಸುವುದು ಸ್ವಲ್ಪ ಕರ್ನಾಟಕದಲ್ಲಲ್ಲ. ಅನುಕೂಲವಾಗುವುದಿದ್ದರೆ, ಬೆಂಗಳೂರು – ಮುಂಬೈ, ಬೆಂಗಳೂರು ಮಂಗಳೂರಿಗೆ ಘೋಷಣೆ ಮಾಡಬೇಕಾಗಿತ್ತು ಎಂದರು.
ಬಜೆಟ್ ಅದೇ ಸವಕಲು ಪದಗಳಿಂದ ತುಂಬಿತ್ತು. ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದಿಕ್ಕೂಚಿಯಿಲ್ಲದೆ ಕಂಗಾಲಾಗಿರುವ ಕುರುಹುಗಳು ಈ ಬಜೆಟ್‌ನಲ್ಲಿ ಕಾಣಿಸುತ್ತಿವೆ ಎಂದರು.























