ಕಲಬುರಗಿ: ರಾಜ್ಯ ಸರ್ಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತವೆಂದು ಗುರುತಿಸುವ ಮೂಲಕ ಹಿಂದೂ ಜಾತಿಗಳನ್ನು ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಳಿಸುವ ಕುತಂತ್ರ ನಡೆಸುತ್ತಿದೆ ಎಂದು ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಆರೋಪ ಮಾಡಿದೆ.
ಸೆ. 22ರಿಂದ 15 ದಿನಗಳ ಕಾಲ ಹಿಂದುಳಿದ ಆಯೋಗದ ಮೂಲಕ ಜಾತಿ ಸಮೀಕ್ಷೆ ನಡೆಸುತ್ತಿದ್ದು, ಆಯೋಗ ಬಿಡುಗಡೆ ಮಾಡಿದ ಜಾತಿ – ಉಪಜಾತಿಗಳ ಪಟ್ಟಿಯಲ್ಲಿ ಅನಧಿಕೃತವಾಗಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತ್ ಜಾತಿಗಳೆಂದು ಗುರುತಿಸಿದೆ ಎಂದು ಮಠಾಧೀಶರಾದ ಶ್ರೀ ಕಲಬುರಗಿಯ ಸಿದ್ದಲಿಂಗ ಆಂದೋಲ ಸ್ವಾಮೀಜಿ, ರಾಜಶೇಖರ್ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು, ಬೆಂಗಳೂರಿನ ರೇವಣಸಿದ್ಧ ಶಿವಾಚಾರ್ಯರು, ಶಿವಮೂರ್ತಿ ಶಿವಾಚಾರ್ಯರು ಸೇರಿದಂತೆ ಹಲವಾರು ಮಠಾಧೀಶರು ಸೋಮವಾರ ಕಲಬುರಗಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿ, ಕೂಡಲೇ ಸರ್ಕಾರ ಜಾತಿ ಸಮೀಕ್ಷೆಯಿದ ಹಿಂದೂ ಮತ್ತು ವೀರಶೈವ ಲಿಂಗಾಯತ ಜಾತಿ ಪಂಗಡಗಳೊಂದಿಗೆ ಸೇರಿಸಿರುವ ಕ್ರಿಶ್ಚಿಯನ್ ಪದವನ್ನು ಕೈಬಿಡಬೇಕು, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದೂ ಹಾಗೂ ವೀರಶೈವ ಜಾತಿಗಳನ್ನು ಕ್ರೈಸ್ತನಾಗಿಸುವ ಹೂನ್ನಾರಕ್ಕೆ 50ಕ್ಕೂ ಹೆಚ್ಚು ಪ್ರಮುಖ ಜಾತಿಗಳನ್ನು ಸೇರಿಸಲಾಗಿದೆ. ಉದಾಹರಣೆಯಾಗಿ ಲಿಂಗಾಯತ ಕ್ರೈಸ್ತ್, ಒಕ್ಕಲಿಗ ಕ್ರೈಸ್ತ್, ಕುರುಬ ಕ್ರೈಸ್ತ್, ನೇಕಾರ ಕ್ರೈಸ್ತ್, ಮಡಿವಾಳ ಕ್ರೈಸ್ತ್, ಬಿಲ್ಲವ ಕ್ರೈಸ್ತ್ , ಕುಂಬಾರ ಕ್ರೈಸ್ತ್, ಮಾದಿಗ ಕ್ರೈಸ್ತ್ ಹೀಗೆ ಹೊಸ ಕ್ರೈಸ್ತ್ ಜಾತಿಗಳನ್ನು ಸೃಷ್ಟಿಸಲಾಗಿದೆ ಎಂದು ಆಪಾದಿಸಿದರು.
ನಮ್ಮ ಜಾತಿ ಸಮುದಾಯಗಳನ್ನು ಒಡೆಯುವ ಕುತಂತ್ರ ಇದರ ಹಿಂದೆ ಇದೆ. ಜಾತಿ ಒಳಗಡೆ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು ನಮ್ಮನ್ನು ದುರ್ಬಲಗೊಳಿಸುವ ಸರ್ಕಾರ ಮಾಡುತ್ತಿದೆ. ಕ್ರೈಸ್ತ್ ಹೆಸರಿನಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ. ಈ ಹಿಂದೆ ಕ್ರೈಸ್ತ್ ಮಿಷನರಿ ಹಿಂದೂ ಧರ್ಮವನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿತ್ತು ಇದೀಗ ಸರ್ಕಾರವೇ ಕ್ರೈಸ್ತ್ ಸಮುದಾಯದೊಂದಿಗೆ ಕೈ ಜೋಡಿಸಿ ಮತಾಂತರಗೊಳಿಸಿ ಮುಂದಾಗುವ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹೂನ್ನಾರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.