ಕಲಬುರಗಿ: ತ್ರಿವಿಧ ದಾಸೋಹಿ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ

0
102


ಕಲಬುರಗಿ: ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ, ಶರಣಬಸವ ವಿವಿ ಸಂಸ್ಥಾಪಕ, ಶಿಕ್ಷಣ ಸಂತ, ದಾಸೋಹ ಮಹಾಮನೆಯ ಮಹಾಮಹಿಮ, ವಿದ್ಯಾಭಂಡಾರಿ ಪರಮ ಪೂಜ್ಯ ಡಾ. ಶ್ರೀ ಶರಣಬಸವಪ್ಪ ಅಪ್ಪಾ (90) ಗುರುವಾರ ರಾತ್ರಿ 9:23ಕ್ಕೆ ಲಿಂಗೈಕ್ಯರಾದರು.

ಪತ್ನಿ ಮಾತೋಶ್ರೀ ದಾಕ್ಷಾಯಣಿ ಎಸ್. ಅಪ್ಪ, ಪುತ್ರ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ 7 ಪುತ್ರಿಯರನ್ನು, ಅಸಂಖ್ಯ ಭಕ್ತಾಧಿಗಳನ್ನು ಅವರು ಅಗಲಿದ್ದಾರೆ. ಗುರುವಾರ ಬೆಳಗ್ಗೆ ಅಪ್ಪಾಜಿ ಚಟುವಟಿಕೆಗಳು ಅತ್ಯಂತ ಗಂಭೀರವಾಗಿದ್ದರೂ, ಸಂತೋಷದಿಂದ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸಮಯ ಕಳೆದರು.

ಅಂತಿಮ ಇಚ್ಛೆಯಂತೆ, ಶರಣಬಸವೇಶ್ವರ ದೇವಾಲಯಕ್ಕೆ ಆರೋಗ್ಯಕರ ಉಸಿರಾಟದ ಸ್ಥಿತಿಯಲ್ಲಿ ಕರೆದುಕೊಂಡು ಹೋಗಲಾಗಿತ್ತು. ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿಯೇ ಪ್ರದಕ್ಷಿಣೆ ಮಾಡಿಸಲಾಗಿತ್ತು.

ಸಂಜೆ ಸುಮಾರು 7:30ಕ್ಕೆ ಅಪ್ಪಾಜಿಯವರನ್ನು ದಾಸೋಹಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ದಿನದ ಮೊದಲಾರ್ಧದಲ್ಲೇ ತಾತ್ಕಾಲಿಕ ಐಸಿಯು ಸಿದ್ಧಪಡಿಸಲಾಗಿತ್ತು. ಅಂತಿಮ ಉಸಿರಿನವರೆಗೂ ಸಮರ್ಪಿತ ವೈದ್ಯಕೀಯ ತಂಡದ ಕಾಳಜಿಯಲ್ಲಿ ಎಲ್ಲಾ ಚಿಕಿತ್ಸಾ ಮತ್ತು ಸಹಾಯಕ ಔಷಧೋಪಚಾರಗಳನ್ನು ಮುಂದುವರೆಸಲಾಯಿತು.

ಅಪ್ಪಾಜಿಯವರ ಆರಾಮಕ್ಕಾಗಿ ಅತ್ಯುತ್ತಮ ಪ್ಯಾಲಿಯೇಟಿವ್ ಚಿಕಿತ್ಸೆ ನೀಡಲಾಯಿತು. ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ವೈದ್ಯರು ದೃಢಪಡಿಸಿದರು. ಅಪ್ಪಾಜಿ ನಮ್ಮ ಹೃದಯಗಳಲ್ಲಿ ಮತ್ತು ಭಕ್ತರ ಭಾವನೆಯಲ್ಲಿ ಸದಾಕಾಲ ಅಮರರಾಗಿದ್ದಾರೆ. ಎಲ್ಲಾ ಭಕ್ತರೂ ಅವರ ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಿ, ದೇವಾಲಯದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವಂತೆ ಭಕ್ತ ಸಮೂಹಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನ ವತಿಯಿಂದ ಮನವಿ ಮಾಡಲಾಗಿದೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ: ಶ್ರೀ ಶರಣಬಸವೇಶ್ವರ ದೇವಸ್ಥಾನದ ಮುಂಭಾಗ ಶುಕ್ರವಾರ ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದ್ದು, ಭಕ್ತಾದಿಗಳ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದೇಗುಲದ ಆವರಣದಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.

ಹೆಚ್ಚುವರಿ ಡಿಎಆರ್, ಸಿಎಆರ್ ಪಡೆ, ಕೆಎಸ್‌ಆರ್‌ಪಿ ಪಡೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಅಗತ್ಯಬಿದ್ದರೆ ಹೊರಗಿನ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕರೆತರಲಾಗುವುದು. ಭಕ್ತರು ಶಾಂತಿ, ಸಂಯಮದಿಂದ ವರ್ತಿಸಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರು ಶರಣಬಸಪ್ಪ ಅಪ್ಪ ಲಿಂಗೈಕ್ಯರಾದ ಬಳಿಕ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.

‘ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಶರಣ ಬಸವೇಶ್ವರ ಮಹಾಸಂಸ್ಥಾನದ ಮಠಾಧೀಶರಾದ ಡಾ. ಶರಣಬಸಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ನೋವುಂಟು ಮಾಡಿದೆ. ಬಸವಾದಿ ಶರಣರು ತೋರಿದ ಕಾಯಕ ಮತ್ತು ದಾಸೋಹದ ಹಾದಿಯಲ್ಲಿ ನಡೆಯುತ್ತಾ, ಸಮಾಜದ ಏಳಿಗೆಗಾಗಿ ಸದಾ ತುಡಿಯುತ್ತಿದ್ದ ನಿಜ ಬಸವಾನುಯಾಯಿ ಶರಣಬಸಪ್ಪ ಅಪ್ಪನವರ ಅಗಲಿಕೆಯಿಂದ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಗುರುಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸಿದ್ದರಾಮಯ್ಯ ಸಂತಾಪದಲ್ಲಿ ಹೇಳಿದ್ದಾರೆ.

Previous articleDarshan Bail News: ದರ್ಶನ್‌, ಪವಿತ್ರಾ ಸೇರಿ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
Next articleತಗ್ಗಲಿದೆ ಜಿಎಸ್‌ಟಿ ಹೊರೆ: ದೀಪಾವಳಿ ಹಬ್ಬಕ್ಕೆ ದೊಡ್ಡ ಉಡುಗೊರೆ, ಮೋದಿ ಘೋಷಣೆ

LEAVE A REPLY

Please enter your comment!
Please enter your name here