ಅಭಿವೃದ್ಧಿ ಕೇವಲ ಘೋಷಣೆಗೆ ಸೀಮಿತವಾಗದೆ, ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಫಲಿತಾಂಶ ನೀಡಬೇಕು
ಸಂ.ಕ. ಸಮಾಚಾರ ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ಸಂಪೂರ್ಣವಾಗಿ ನಿವಾರಿಸಿ, ಮುಂದಿನ ಹತ್ತು ವರ್ಷಗಳಲ್ಲಿ ಸಮಾನ ಅಭಿವೃದ್ಧಿಯನ್ನು ಸಾಧಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ಯಡ್ರಾಮಿ ಪಟ್ಟಣದಲ್ಲಿ ಸೋಮವಾರ 17 ಪ್ರಜಾಸೌಧಗಳ ಹಾಗೂ ಸುಮಾರು 300 ಕೆಪಿಎಸ್ ಶಾಲೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇದನ್ನೂ ಓದಿ: VB-G RAM G ಕಾಯ್ದೆ ಹಿಂಪಡೆಯಲು ಪ್ರಧಾನಿ ಮೋದಿಗೆ ಆಗ್ರಹ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರೊ. ಗೋವಿಂದರಾವ್ ಅವರ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ವರದಿ ಈ ತಿಂಗಳಲ್ಲೇ ಅಥವಾ ಮುಂದಿನ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ವರದಿ ಬಂದ ತಕ್ಷಣ ಅದರ ಶಿಫಾರಸುಗಳನ್ನು ಪರಿಶೀಲಿಸಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ಕ್ರಮೇಣ ನಿವಾರಿಸಿ, ಮುಂದಿನ ಹತ್ತು ವರ್ಷಗಳಲ್ಲಿ ಸಮಾನ ಅಭಿವೃದ್ಧಿ ಸಾಧಿಸುವುದು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ದಿಕ್ಕಿನಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್
KKRDB ಅನುದಾನ ಪರಿಣಾಮಕಾರಿಯಾಗಿ ಬಳಕೆ ಅಗತ್ಯ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ, ಕೆ ಕೆ ಆರ್ ಡಿ ಬಿ (ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ) ಅಸ್ತಿತ್ವಕ್ಕೆ ಬಂದ ಬಳಿಕ ನಮ್ಮ ಸರ್ಕಾರವೇ ನಿರಂತರವಾಗಿ ಅನುದಾನ ಒದಗಿಸಿದೆ ಎಂದು ಹೇಳಿದರು.
2023ರಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟು 13,000 ಕೋಟಿ ರೂಪಾಯಿ ಅನುದಾನವನ್ನು ಕೆಕೆಆರ್ ಡಿಬಿಗೆ ನೀಡಲಾಗಿದೆ. ಈ ಹಣವನ್ನು ಸಮರ್ಪಕವಾಗಿ ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ಸೂಚಿಸಿದರು. ಈ ವರ್ಷವೇ ಕನಿಷ್ಠ 4,000 ಕೋಟಿ ರೂಪಾಯಿ ಅನುದಾನವನ್ನು ಪರಿಣಾಮಕಾರಿಯಾಗಿ ಖರ್ಚು ಮಾಡಿದಲ್ಲಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: 2020–21ರ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರಕಟ
ಅಭಿವೃದ್ಧಿ ಕೇವಲ ಘೋಷಣೆಗೆ ಸೀಮಿತವಾಗದೆ, ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನೆಲಮಟ್ಟದಲ್ಲಿ ಫಲಿತಾಂಶ ನೀಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.









