ಸಂ.ಕ. ಸಮಾಚಾರ ಕಲಬುರಗಿ: ಆರ್‌ಎಸ್‌ಎಸ್‌ನವರು ಪಥಸಂಚಲನೆ ವಿಚಾರ ಕುರಿತು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ಅದೇ ದಿನದಂತೆ ಅಲ್ಲೇ ಪಥಸಂಚಲನ ಮಾಡುತ್ತೇವೆ ಎಂದು ಆರ್‌ಎಸ್‌ಎಸ್ ಹೇಳಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಕೂಡಾ ಅದೇ ದಿನ ಅಲ್ಲೇ ತಾವೂ ಪಥಸಂಚಲನ ಮಾಡುವುದಾಗಿ ಅರ್ಜಿ ಸಲ್ಲಿಸಿವೆ. ಪ್ರಸ್ತುತ ಈ ವಿಚಾರ ಹೈಕೋರ್ಟ್‌ನಲ್ಲಿದೆ. ಹೈಕೋರ್ಟ್ ತಿರ್ಮಾನ ಏನು ಬರುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.
ಪತ್ರ ಬರೆದಿರುವದರಲ್ಲಿ ತಪ್ಪೆನಿದೆ?: ಪಥಸಂಚಲನದಲ್ಲಿ ಭಾಗವಹಿಸಲು ಕೆಲವರಿಗೆ ಕರೆ ನೀಡಲಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಕಾಲ್ ಮಾಡಿದ್ದಾರೆ. ಆ ಬಗ್ಗೆ ವಿಚಾರಿಸಲಾಗಿ ಅವರಿಗೆ ದೇಶಭಕ್ತಿ ಇತ್ಯಾದಿ ಕುರಿತು ಹೇಳಲಾಗುತ್ತಿದೆ ಎನ್ನುವುದನ್ನು ಹೊರತುಪಡಿಸಿ ಬೇರೆ ಹೇಳಿರಲಿಲ್ಲ ಎನ್ನುವ ಮಾಹಿತಿ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಹಾಗೂ ಸಮಾಜದ ಶಾಂತಿ ಕಾಪಾಡಲು ಆರ್‌ಎಸ್‌ಎಸ್ ಅಷ್ಟೇ ಅಲ್ಲ ಬೇರೆ ಯಾವುದೇ ಸಂಘಟನೆಗಳಿಗೂ ಸರ್ಕಾರಿ ಜಾಗ ಬಳಸಿಕೊಳ್ಳದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಅದರಲ್ಲೇನು ತಪ್ಪಿದೆ ? ಎಂದರು.
ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಹೈಕೋರ್ಟ್ ಆದೇಶ ಇದೆ. ಆದರೆ, ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ನವರು ಪೊಲೀಸರ ಅನುಮತಿ ಪಡೆಯದೆ ಕೇವಲ ಮಾಹಿತಿಗಾಗಿ ಎಂದು ಬರೆದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಯಾರಾದರೂ ಸಾವಿರಾರು ಜನರು ಸೇರಬೇಕಾದರೆ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕೇ ಹೊರತು ಮಾಹಿತಿ ನೀಡುವಂತಿಲ್ಲ. ಆರ್‌ಎಸ್‌ಎಸ್ ಇದನ್ನು ಅನುಸರಿಸುವುದಾದರೆ, ನಾವೂ ಅನುಸರಿಸುತ್ತೇವೆ ಎಂದು ಇತರರು ಪ್ರಶ್ನೆ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸರ್ಕಾರದ ಆದೇಶದ ನಂತರ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ನನ್ನ ಮೇಲೆ ಮುಗಿಬಿದ್ದರು. ಬಿಜೆಪಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ.? ನಾನು ಪತ್ರ ಬರೆದ ನಂತರ ಸಾವಿರಾರು ಕರೆಗಳು ಬಂದವು. ಖರ್ಗೆ ಇದನ್ನು ಬಿಜೆಪಿಯವರು ಪ್ರಚಾರಕ್ಕೆ ಮಾಡುತ್ತಿದ್ದಾರೆ ಎಂದರು. ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ ನನಗೆ ಯಾಕೆ ಪ್ರಚಾರ? ಒಬ್ಬ ಕಾಲ್ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬ ವರ್ಗದವರನ್ನು ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಲಿಲ್ಲ.
ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಅವನನ್ನು ಅರೆಸ್ಟ್ ಮಾಡಿದ್ದಾರೆ. ನನಗೆ ಕರೆ ಮಾಡಿದ ವ್ಯಕ್ತಿ ತನ್ನ ಕಣಕಣದಲ್ಲಿಯೂ ಆರ್‌ಎಸ್‌ಎಸ್ ಇದೆ ಅಂದಿದ್ದಾನೆ. ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ಅರೆಸ್ಟ್ ಆದ ವ್ಯಕ್ತಿ ಬಡ ಕುಟುಂಬದವನು. ಆತನನ್ನು ಪ್ರಚೋದಿಸಿದವರು ಯಾರು ಅವರಿಗೂ ಶಿಕ್ಷೆಯಾಗಬೇಕಲ್ಲವೇ? ಎಂದರು.
ಕಲಬುರಗಿ ಸೇರಿದಂತೆ ಎಲ್ಲ ಕಡೆ ಮಾಹಿತಿ ನೀಡಿದ್ದಾರೆ ಹೊರತು ಅನುಮತಿ ಕೇಳಿಲ್ಲ. ಇವರು ಕೇಳಿದ ತಕ್ಷಣ ಭದ್ರತೆ ಕೊಡಲು ಪೊಲೀಸರಿಗೇನು ಕೆಲಸ ಇಲ್ಲವಾ? ಚಿತ್ತಾಪುರದಲ್ಲಿ ಅನುಮತಿ ನಿರಾಕರಿಸಿದ್ದರಿಂದ ಹೈಕೋರ್ಟ್‌ಗೆ ಹೋದರು. ಇತರರು ಕೂಡಾ ನಮಗೂ ಅನುಮತಿ ಕೊಡಿ ಎಂದರು. ನೋಂದಣಿಯಾಗದ ಒಂದು ಸಂಸ್ಥೆಯ ಕಾರ್ಯಕರ್ತರು ಕೈಯಲ್ಲಿ ದೊಣ್ಣೆ ಹಿಡಿದು ಪಥಸಂಚಲನ ಮಾಡಿದರೆ, ಸಾರ್ವಜನಿಕರಿಗೆ ಭೀತಿ ಆಗುವುದಿಲ್ಲವಾ? ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು.
ಪಥಸಂಚಲನದಲ್ಲಿ ಭಾಗಿಯಾದವರಿಗೆ ನೋಟಿಸ್: ಬೇರೆ ಬೇರೆ ಕಡೆ ನಡೆದ ಪಥಸಂಚಲನದಲ್ಲಿ ಭಾಗಿಯಾದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ವೀಸ್ ರೂಲ್ಸ್ ಪ್ರಕಾರ ಕ್ರಮ ಜರುಗಿಸಲಾಗುವುದು. ಕೇಂದ್ರ ಸರ್ಕಾರದ ಆದೇಶ ರಾಜ್ಯ ಸರ್ಕಾರದ ನೌಕರರಿಗೂ ಅನ್ವಯವಾಗುತ್ತದೆ ಎಂದು ಭಾವಿಸಿದ್ದಾರೆ. ಅದು ಹಾಗೆ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಈ ಎಲ್ಲ ಬೆಳವಣಿಗೆ ನಂತರ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ಮಾಡಲಿ ಬಿಡಿ. ಪ್ರಶ್ನೆ ಎತ್ತಿದ್ದು ನಾನೇ ತಾನೆ. ಬೇರೆಯವರ ಐಡಿಯಾಲಜಿ ಬಗ್ಗೆ ನಾನು ಹೇಳುವುದಿಲ್ಲ. ನನ್ನ ಐಡಿಯಾಲಜಿ, ಸಿಎಂ ಅವರ ಐಡಿಯಾಲಜಿ, ಖರ್ಗೆ ಸಾಹೇಬರ ಐಡಿಯಾಲಜಿ, ರಾಹುಲ್ ಗಾಂಧಿಯವರ ಐಡಿಯಾಲಜಿ ಸರಿ ಇದೆಯಲ್ಲ ಅಷ್ಟು ಸಾಕು ಎಂದರು.
ಸೇಡಂನಲ್ಲಿ ಕಾನೂನು ಉಲ್ಲಂಘನೆ ಮಾಡಿ ಪಥ ಸಂಚಲನ ಮಾಡಿದ್ದಾರೆ. ಅದನ್ನು ಕೋರ್ಟ್ ಗಮನಕ್ಕೆ ತರಲಾಗುವುದು ಎಂದ ಸಚಿವರು ಎಲ್ಲವೂ ಪರಿಗಣನೆ ಆಗುತ್ತದೆ ಎಂದ ಸಚಿವರು, ಅಂದಿನ ಶಾಂತಿ ಸಭೆಯಲ್ಲಿ ಆರ್‌ಎಸ್‌ಎಸ್ ಬದಲು ಬಿಜೆಪಿಯವರಿಗೇನು ಕೆಲಸ? ಅಶೋಕ್ ಪಾಟೀಲ್ ಯಾಕೆ ಅಂದಿನ ಶಾಂತಿ ಸಭೆಗೆ ಹೋಗಿಲ್ಲ.? ಅವರ ಬದಲು ಬಿಜೆಪಿಯವರು ಯಾಕೆ ಹೋಗಿದ್ದರು? ಅವರು ಶಾಂತಿ ಸಭೆಗೆ ಬಂದಿದ್ದರೋ ಅಥವಾ ಭಂಗ ಉಂಟು ಮಾಡಲು ಬಂದಿದ್ದರೋ? ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಪಥಸಂಚಲನ ವಿಚಾರದಲ್ಲಿ ಗೊಂದಲ ಸೃಷ್ಠಿಸುತ್ತಿರುವವರು ಯಾರು? ಲಾಠಿ ಹಿಡಿಯುವ ವಿಚಾರದಲ್ಲಿ ಎಲ್ಲಾ ಕಡೆ ಏನೂ ತಕರಾರು ಇಲ್ಲ ಚಿತ್ತಾಪುರದಲ್ಲಿ ಮಾತ್ರವೇ ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿತ್ತಾಪುರದಲ್ಲಿ ಕಾನೂನು ಇದೆ. ಹಾಗೆ ಎಲ್ಲಕಡೆಯೂ ಇದೆ. ಆದರೆ ಚಿತ್ತಾಪುರ ಯುವಕರ ಭವಿಷ್ಯದ ಪ್ರಶ್ನೆ ಬಂದಾಗ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ಈಗ ವಿಚಾರ ಹೈಕೋರ್ಟ್‌ನಲ್ಲಿದೆ. ಲಾಠಿಹಿಡಿದುಕೊಂಡು ಪಥಸಂಚಲನ ನಡೆಸಲು ಅನುಮತಿ ನೀಡಿದರೆ ನಮ್ಮದೇನು ಅಭ್ಯಂತರವಿಲ್ಲ.
ಆರ್‌ಎಸ್‌ಎಸ್ ನೋಂದಣಿ ಪ್ರಶ್ನೆ ಮಾಡಲಾಗುವುದು: ಆರ್‌ಎಸ್‌ಎಸ್ ನೋಂದಣಿ ಪತ್ರದ ವಿಚಾರ ಕುರಿತಂತೆ ಹೈಕೋರ್ಟ್‌ನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಮಾಡಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ ಸಿಕ್ಕರೆ ನೋಂದಣಿ ವಿಚಾರದಲ್ಲಿಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುತ್ತಾರೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು, ಯಾರು ಸಿಎಂ ಆಗಬೇಕು ಅಂತ ನಿರ್ಧಾರ ಮಾಡುತ್ತಾರೆಯೇ? ಎಂದರು. ನವೆಂಬರ್ ಕ್ರಾಂತಿ ಏನೂ ನಡೆಯಲ್ಲ. ಉತ್ತರಾಧಿಕಾರಿ ವಿಚಾರದಲ್ಲಿ ಯತೀಂದ್ರ ಅವರ ಹೇಳಿಕೆ ಅದು ಅವರು ವೈಯಕ್ತಿಕ ವಿಚಾರ. ಸಿಎಂ ಮುಂದಿನ ಚುನಾವಣೆ ನಿಲ್ಲುವ ವಿಚಾರ ಅದು ಅವರು ವೈಯಕ್ತಿಕ ವಿಚಾರ. ಎಲ್ಲಾ ಸಮಾಜದವರು ಸಿಎಂ ಆಗಬೇಕು ಎಂದು ಬಯಸುತ್ತಾರೆ. ದಲಿತ ಸಿಎಂ ವಿಚಾರ ಕೂಡಾ ಹಾಗೆ. ಅದನ್ನು ಎಲ್ಲಿ ಚರ್ಚೆ ನಡೆಸಬೇಕೋ ಅಲ್ಲೇ ನಡೆಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುವುದಕ್ಕೆ ಆರ್‌ಎಸ್‌ಎಸ್‌ನ್ನು ಟೀಕಿಸುತ್ತಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆರ್‌ಎಸ್‌ಎಸ್‌ನ್ನು ಟೀಕಿಸಿದರೆ ಡಿಸಿಎಂ ಆಗುವುದಾದರೆ ಡಿಸಿಎಂ ಯಾಕೆ ಸಿಎಂ ಮಾಡಲಿ ಬಿಡಿ ಎಂದರು. ಕಲಬುರಗಿಯಲ್ಲಿ ತಳವಾರ ಸಮಾಜದ ಪ್ರತಿಭಟನೆ ವಿಚಾರ, ಬೆಂಗಳೂರಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಧ್ಯದಲ್ಲೇ ಕೋಲಿ ಕಬ್ಬಲಿಗ ಹಾಗೂ ತಳವಾರ ಸಮುದಾಯವನ್ನು ಎಸ್ ಟಿ ಸೇರಿಸುವ ವಿಚಾರ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು ಇಲ್ಲ ಅಂತ ಅಲ್ಲ. ಆದರೆ ಆಯ್ಕೆ ಸಮಿತಿ ಮಾನದಂಡಗಳನ್ನು ಅನುಕರಿಸಿ ಆಯ್ಕೆ ಮಾಡಲಾಗಿದೆ ಎಂದರು.
ಬೀದಿನಾಯಿಗಳ ಹಾವಳಿ ತಪ್ಪಿಸಲು ಕ್ರಮವಹಿಸಲಾಗುತ್ತಿದೆ. ಇದಕ್ಕಾಗಿ ರೂ 5 ಕೋಟಿ ಅನುದಾನ ನೀಡಲಾಗುತ್ತಿದೆ. ನಾಯಿಗಳ ಸೆಡ್ ನಿರ್ಮಾಣ ಮಾಡಿ ಅವುಗಳನ್ನು ಸುಸ್ಥಿತವಾಗಿ ಇರಿಸಲಾಗುವುದು ಎಂದು ಸಚಿವರು ಹೇಳಿದರು.
 
                

