Home Advertisement
Home ನಮ್ಮ ಜಿಲ್ಲೆ ಕಲಬುರಗಿ ರಾಜ್ಯಪಾಲರ ನಡೆ ಅಸಂವಿಧಾನಿಕ: ಸಚಿವ ಪ್ರಿಯಾಂಕ್

ರಾಜ್ಯಪಾಲರ ನಡೆ ಅಸಂವಿಧಾನಿಕ: ಸಚಿವ ಪ್ರಿಯಾಂಕ್

0
4

ಕಲಬುರಗಿ: ರಾಜ್ಯಪಾಲರಿಗೆ ಬರೆದುಕೊಟ್ಟ ಭಾಷಣದಲ್ಲಿ ಕೇಂದ್ರದ ವಿರುದ್ಧ ಯಾವುದೇ ಅವಹೇಳನಾಕಾರಿ ಮಾತುಗಳಿರಲಿಲ್ಲ. ಅವರು ಭಾಷಣ ಓದದೇ ನಿರ್ಗಮಿಸಿದ್ದು ಸರಿಯಲ್ಲ. ಅದು ಸಂವಿಧಾನ ವಿರೋಧಿ ನಡೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ತಾಳ್ಮೆಯಿಂದ ಭಾಷಣ ಓದಿ ನಂತರ ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕಿತ್ತು. ಅವರ ವರ್ತನೆ ಸಂವಿಧಾನಕ್ಕೆ ತಕ್ಕುದಾಗಿರಲಿಲ್ಲ. ಹಾಗಾಗಿ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಆಕ್ಷೇಪಿಸಿದ್ದಾರೆ. ಅವರ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತಿರುವ ಬಿಜೆಪಿಗರು ರಾಷ್ಟ್ರಗೀತೆಗೆ ಗೌರವ ಸಲ್ಲಿಸದ ರಾಜ್ಯಪಾಲರ ಮೇಲೆ ಕ್ರಮಕ್ಕೆ ಯಾಕೆ ಒತ್ತಾಯಿಸುತ್ತಿಲ್ಲ ಎಂದು ಪ್ರಶ್ನಿಸಿದರು.

“ರಾಜ್ಯಪಾಲರ‌ ನಡೆ ಅಸಂವಿಧಾನಿಕ. ನಮ್ಮ ಭಾಷಣಲ್ಲಿ ಅವಹೇಳನಕಾರಿ ಮಾತಿದೆಯಾ? ಸಿಎಂ ಅವರು ಮೋದಿಗೆ, ನಾನು ಸಿ.ಆರ್. ಪಾಟೀಲ್ ಅವರಿಗೆ ಹಾಗೂ ಶಿವರಾಜ್ ಸಿಂಗ್ ಚವ್ಹಾಣ ಅವರಿಗೆ ಹಾಗೂ ಕೃಷ್ಣ ಭೈರೇಗೌಡರು ಕೇಂದ್ರಕ್ಕೆ ರಾಜ್ಯದ ಬೇಡಿಕೆಗಳ ಬಗ್ಗೆ ಕೊಟ್ಟಿರುವ ಪತ್ರಗಳ ವಿವರ ಇವೆ ಅಷ್ಟೇ” ಎಂದರು.

ಇದನ್ನೂ ಓದಿ: ದೇಶದಲ್ಲಿ 90 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ ಕೀರ್ತಿ ಕಾಂಗ್ರೆಸ್‌ನವರದು

“ಪಂಚಾಯತಿಗಳಿಗೆ 15ನೇ ಹಣಕಾಸಿನ ಆಯೋಗದ ಅನುದಾನ ಕೇಳುವುದು ತಪ್ಪಾ? ವಿಬಿ ಜಿ ರಾಮ್ ಜಿ ಅಡಿಯಲ್ಲಿ ರಾಜ್ಯದ ಪಾಲು 40% ನಿಗದಿಪಡಿಸಿದ್ದಾರೆ. ರಾಜ್ಯದ ಅಭಿಪ್ರಾಯ ಕೇಳಿದ್ದಾರೆ? ಅದನ್ನು ನಾವು ಪ್ರಶ್ನಿಸುವುದು ತಪ್ಪಾ? ಅದನ್ನು ನಾವು ಜನರಿಗೆ ರಾಜ್ಯಪಾಲರ ಮೂಲಕ ತಿಳಿಸುವುದು ತಪ್ಪಾ? ರಾಜ್ಯಪಾಲರ ನಡೆ ಕೇಂದ್ರದ ನಿರ್ದೇಶನದಂತೆ ಹಾಗೂ ಆರ್‌ಎಸ್‌ಎಸ್ ನಿರ್ದೇಶನದಂತೆ ನಡೆದಿದೆ. ಬಿಜೆಪಿಗರಿಗೆ ಆರ್‌ಎಸ್‌ಎಸ್‌ನವರಿಗೆ ರಾಷ್ಟ್ರಗೀತೆಯ ಮೇಲೆ ಅಭಿಮಾನವಿಲ್ಲ” ಎಂದು ಜರಿದರು.

ನರೇಗಾ ಯೋಜನೆಯನ್ನು ಬಡವರ ಹಾಗೂ ಹಿಂದುಳಿದವರ ಮತ್ತು ದಲಿತರ ಲಕ್ಷಾಂತರ ಕುಟುಂಗಳಿಗೆ ಆಸರೆಯಾದ ಯೋಜನೆಯಾಗಿತ್ತು. ಅದನ್ನು ತೆಗೆದು ಈಗ ವಿಬಿ ಜಿ ರಾಮ್ ಜಿ ಕಾಯ್ದೆ ರೂಪಿಸಿದೆ. ಈ ಕಾಯ್ದೆಯ ವಿರುದ್ಧ ರಾಜ್ಯಗಳು ವಿರೋಧ ಮಾಡಿವೆ. ನಮ್ಮ ಸರ್ಕಾರ ಕ್ಯಾಬಿನೆಟ್‌ನಲ್ಲಿ ಕಾಯ್ದೆ ವಿರುದ್ಧ ಕೋರ್ಟ್‌ಗೆ ಹೋಗಲು ನಿರ್ಧರಿಸಲಾಗಿದೆ ಎಂದರು.

ಮಹಿಳಾ ಅಧಿಕಾರಿಯನ್ನು ನಿಂದಿಸಿದ ರಾಜೀವ್ ಗೌಡ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜೀವ್ ಗೌಡನನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈಗಾಗಲೇ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಮಹಿಳೆಯರಿಗೆ ನಿರಂತರ ಕಿರುಕುಳ ಹಾಗೂ ದಲಿತರ ಮೇಲೆ ದೌರ್ಜನ್ಯ ನಡಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕರಿಂದ ನಮ್ಮ ಪಕ್ಷ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

Previous article5 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ: ಕನ್ನಡದ ನಟಿ ಬದುಕಿನಲ್ಲಿ ಏನಾಯ್ತು? ಮಾಜಿ ಪತಿಯ ಬಗ್ಗೆ ಹೊಸ ಪೋಸ್ಟ್!