ಕಲಬುರಗಿ: ಅಣ್ಣನ ಅಗಲಿಕೆಯನ್ನು ಸಹಿಸಿಕೊಳ್ಳಲಾಗದೆ, ಮರುದಿನವೇ ತಮ್ಮನೂ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ. ಸತತ ಎರಡು ದಿನಗಳಲ್ಲಿ ಸಹೋದರರು ಅಗಲಿರುವುದರಿಂದ ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಗ್ರಾಮದ ಹಿರಿಯ ನಿವಾಸಿ ಬಸವಂತರಾಯ ಸಣ್ಣಕ್ (81) ಅವರು ಜನವರಿ 26ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮರುದಿನ ಜನವರಿ 27ರಂದು ಅವರ ಅಂತ್ಯಸಂಸ್ಕಾರ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅವರ ತಮ್ಮ ಶಿವರಾಯ ಸಣ್ಣಕ್ (79) ಅವರು ಅಣ್ಣನ ಅಗಲಿಕೆಯಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಮರಳಿದ ನಂತರ ಶಿವರಾಯ ಸಣ್ಣಕ್ ಅವರು ಹಾಸಿಗೆ ಹಿಡಿದಿದ್ದು, ಮನಸ್ಸಿನ ಮೇಲೆ ಅಣ್ಣನ ಸಾವಿನ ದುಃಖ ಗಾಢವಾಗಿ ಪರಿಣಾಮ ಬೀರಿತ್ತು ಎನ್ನಲಾಗಿದೆ. ಅಣ್ಣನ ನೆನಪುಗಳು ಹಾಗೂ ಆಘಾತದಿಂದ ರಾತ್ರಿ ಸಮಯದಲ್ಲೇ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು, ಚಿಕಿತ್ಸೆ ಫಲಕಾರಿಯಾಗದೇ ಅವರು ಕೂಡ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಒಂದೇ ಕುಟುಂಬದಲ್ಲಿ, ಅದೂ ಸಹೋದರರು ಸತತ ಎರಡು ದಿನಗಳಲ್ಲಿ ಸಾವನ್ನಪ್ಪಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಬಡದಾಳ ಗ್ರಾಮದಲ್ಲಿ ಆಳವಾದ ದುಃಖದ ವಾತಾವರಣ ನಿರ್ಮಾಣವಾಗಿದೆ. ಹಿರಿಯ ಸಹೋದರರ ನಡುವಿನ ಆತ್ಮೀಯ ಬಾಂಧವ್ಯವೇ ಈ ದುರಂತಕ್ಕೆ ಕಾರಣವಾಯಿತು ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನ
ಗ್ರಾಮಸ್ಥರು ಮಾತನಾಡುತ್ತಾ, “ಇವರಿಬ್ಬರ ಮಧ್ಯೆ ಅಪಾರ ಪ್ರೀತಿ ಮತ್ತು ಒಡನಾಟ ಇತ್ತು. ಅಣ್ಣನ ಅಗಲಿಕೆಯನ್ನು ಶಿವರಾಯ ಅವರು ಮನಸಾರೆ ಒಪ್ಪಿಕೊಳ್ಳಲಾಗಲಿಲ್ಲ” ಎಂದು ಕಂಬನಿ ಮಿಡಿದಿದ್ದಾರೆ. ಈ ಘಟನೆ ಮಾನಸಿಕ ಆಘಾತವು ಹಿರಿಯ ನಾಗರಿಕರ ಆರೋಗ್ಯದ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.























