ಕಲಬುರಗಿ: ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರ ವಿಜಯಪುರ ಪ್ರವೇಶದ ಮೇಲೆ ಜಿಲ್ಲಾಧಿಕಾರಿ ವಿಧಿಸಿದ್ದ ನಿಷೇಧವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಶುಕ್ರವಾರ ಎತ್ತಿಹಿಡಿದಿದೆ.
ವಿಜಯಪುರ ಜಿಲ್ಲಾಧಿಕಾರಿಗಳು ಅಕ್ಟೋಬರ್ 16ರಂದು ಹೊರಡಿಸಿದ ಆದೇಶದಂತೆ, ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ಅಕ್ಟೋಬರ್ 16ರಿಂದ ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಸ್ವಾಮೀಜಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಹಿನ್ನೆಲೆ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಪ್ರಸಿದ್ಧ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ, ಅಕ್ಟೋಬರ್ 7ರಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದರು. ಅವರು, “ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಯ ಕೃಪಾಪೋಷಿತ ನಾಟಕ ಮಂಡಳಿ. ಇವರು ಬಸವ ಸಂಸ್ಕೃತಿ ಅಭಿಯಾನ ಎಂಬ ನಾಟಕದ ಮೂಲಕ ಕರ್ನಾಟಕದಾದ್ಯಂತ ತಿರುಗಾಡಿ, ದೇವಾಲಯದ ಬದಲು ಹೋಟೆಲ್‌ಗಳಲ್ಲಿ ಕಾಲ ಕಳೆಯಿರಿ, ಮಾಂಸ ತಿನ್ರಿ, ಮದ್ಯ ಸೇವಿಸಿ ಎನ್ನುವ ರೀತಿಯಲ್ಲಿ ಜನರನ್ನು ತಪ್ಪು ದಾರಿಯಲ್ಲಿಗೆ ಒಯ್ಯುತ್ತಿದ್ದಾರೆ” ಎಂದು ಹೇಳಿದ್ದರು ಎಂಬ ಆರೋಪ ಹೊರಬಿದ್ದಿದೆ.
ಈ ಹೇಳಿಕೆಗಳು ಲಿಂಗಾಯತ ಸಮಾಜ ಹಾಗೂ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಎಂದು ಪರಿಗಣಿಸಲ್ಪಟ್ಟಿದ್ದು, ಸಮಾಜದಲ್ಲಿ ಅಶಾಂತಿ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಸ್ವಾಮೀಜಿಯವರಿಗೆ ಜಿಲ್ಲೆಯೊಳಗಿನ ಪ್ರವೇಶ ನಿಷೇಧ ಆದೇಶ ಹೊರಡಿಸಿದ್ದರು.
ಸ್ವಾಮೀಜಿಯ ಕಾರ್ಯಕ್ರಮ : ಈ ನಿಷೇಧದ ಪರಿಣಾಮವಾಗಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಬಸವನ ಬಾಗೇವಾಡಿಯಲ್ಲಿ ನಡೆಯುತ್ತಿರುವ ಸಮರ್ಥ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮದಲ್ಲಿ (ಅಕ್ಟೋಬರ್ 17) ಭಾಗವಹಿಸಲು ಸಾಧ್ಯವಾಗಿಲ್ಲ.


























