ಕಲಬುರಗಿ: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗುವಂತೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಫೋಟಕ ಆರೋಪ ಹೊರಿಸಿದ್ದಾರೆ. ಯತ್ನಾಳ್ ಅವರು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ, “ಡಿ.ಕೆ.ಶಿವಕುಮಾರ್ ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಅವರು ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಚರ್ಚೆ ನಡೆಸಿದ್ದರು. ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ರಹಸ್ಯ ಸಭೆ ನಡೆಸಿದ ವಿಷಯ ನನಗೆ ಖಚಿತ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಯತ್ನಾಳ್ ಆರೋಪ: ಉಪಮುಖ್ಯಮಂತ್ರಿಯ ರಾಜಕೀಯ ನಡೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಸಂಶಯ ಹುಟ್ಟಿಸುವಂತೆ ಈ ಹೇಳಿಕೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಈಗಾಗಲೇ ನೇತೃತ್ವದ ಬಗ್ಗೆ ಅಸಮಾಧಾನ, ಹರಿದಾಡುತ್ತಿರುವ ಸಂದರ್ಭದಲ್ಲಿ ಯತ್ನಾಳ್ ಅವರ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಶಿವಕುಮಾರ್ ಅವರು ಸ್ವಂತ ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ವ್ಯಕ್ತಿ. ಪಕ್ಷ ಬದಲಾವಣೆ ಅವರಿಗೆ ಹೊಸದಲ್ಲ.ಅವಕಾಶ ಸಿಕ್ಕರೆ ಬಿಜೆಪಿ ಜೊತೆ ಸೇರಲು ಹಿಂಜರಿಯುವುದಿಲ್ಲ” ಎಂದು ಯತ್ನಾಳ್ ತೀವ್ರವಾಗಿ ಟೀಕಿಸಿದ್ದಾರೆ.
ನಮ್ಮ ಆಂತರಿಕ ವರದಿಯಲ್ಲಿ ಡಿಕೆಶಿ ಕಡೆ 12 ಶಾಸಕರು ಇಲ್ಲ ಅಂತಾ ವರದಿ ಬಂತು. ಹೀಗಾಗಿ ನಾವು ಸರ್ಕಾರ ಮಾಡಲು ಪ್ರಯತ್ನಿಸಿಲ್ಲ ಅಂತಾ ಬಿಜೆಪಿ ಹೈಕಮಾಂಡ್ ಹೇಳಿತ್ತು. ವಿಜಯೇಂದ್ರ ಹಾಗೂ ಡಿಕೆಶಿ ಇವರಿಬ್ಬರು ಕುಳಿತುಬಿಟ್ಟಿದ್ದರೆ ಕರ್ನಾಟಕವನ್ನ ಮಾರಾಟ ಮಾಡುತ್ತಿದ್ದರು.
ಡಿಕೆಶಿ ಪಾಪ ನಮಸ್ತೆ ಸದಾ ವತ್ಸಲ್ಯ ಅಂತಾ ಹೇಳಿದ್ರು ನಮಸ್ತೆ ಸೋನಿಯಾ ಮಾತೆ ಇಟ್ಲಿ ಕಾ ಪುತ್ರ ಅಂತಾ ಹಾಡಿದ್ರೆ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಸೋನಿಯಾ ಗಾಂಧಿ ಡಿಕೆಶಿಯನ್ನ ಸಿಎಂ ಮಾಡುತ್ತಿದ್ದರು. ಭಾರತ ಮಾತೆಗೆ ನಮಸ್ತೆ ಅಂದ್ರೆ ಇವರಿಗೆ ನೋವಾಗುತ್ತದೆ. ಇಟ್ಲಿ ಮಾತೆಗೆ ಒಂದು ಹಾಡು ಕಟ್ಟಿ ಹಾಡಬೇಕು. ಸೋನಿಯಾ ಮಾತೆ ಅಂತಾ ಹಾಡಿದ್ರೆ ಡಿಕೆಶಿ 24 ಗಂಟೆಯಲ್ಲಿ ಸಿಎಂ ಆಗುತ್ತಾರೆ ಎಂದು ಟೀಕಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ: ಯತ್ನಾಳ್ ಅವರ ಈ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ʼಆ ಕಸ..ಸಗಣಿ ಮೇಲೆ ಕಲ್ಲು ಹಾಕೋಕೆ ನಂಗೆ ಇಷ್ಟವಿಲ್ಲʼ ಎಂದಷ್ಟೇ ಹೇಳಿ ಚುಟುಕಾಗಿ ಉತ್ತರಿಸಿ ಹೊರಟೇಬಿಟ್ಟರು.