ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ವಾಟ್ಸಪ್ನಲ್ಲಿ ಸುಳ್ಳು ಸುದ್ದಿ ಹರಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯೊಬ್ಬನ ಮೇಲೆ ಕಲಬುರಗಿ ಜಿಲ್ಲೆಯ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗರಗುಂಡಗಿ ಗ್ರಾಮದ ನಿವಾಸಿ ಹಾಗೂ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮಾಳಪ್ಪ ಕಂಠಿಕರ ಎಂಬುವರು ದೂರು ನೀಡಿದ್ದಾರೆ. ಸುಮಾರು 8-10 ದಿನಗಳ ಹಿಂದೆ ಸುಭಾಷ ಎಂಬ ವ್ಯಕ್ತಿಯು ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೋಟೋ ಹಾಕಿ, “ಸಿದ್ದರಾಮಯ್ಯ ಅವರು ನಿಧನ, ಇಂದು ರಾತ್ರಿ ಒಂದು ಗಂಟೆಗೆ ಅಂತ್ಯಕ್ರಿಯೆ ಇದೆ ಓಂ ಶಾಂತಿ” ಎಂದು ಬರೆದು ಸುಳ್ಳು ವದಂತಿ ಹರಡಿದ್ದನು.
ಮಾ. 11ರಂದು ರಾತ್ರಿ ಈ ಬಗ್ಗೆ ವಿಚಾರಿಸಲು ದೂರುದಾರ ಮಾಳಪ್ಪ ಅವರು ಸುಭಾಷನಿಗೆ ಕರೆ ಮಾಡಿ ಮುಖ್ಯಮಂತ್ರಿಗಳ ಬಗ್ಗೆ ಇಂತಹ ಸುಳ್ಳು ಸುದ್ದಿ ಯಾಕೆ ಹಾಕಿದ್ದೀಯಾ ಎಂದು ಪ್ರಶ್ನಿಸಿದ್ದಕ್ಕೆ, ಆರೋಪಿ ಸುಭಾಷನು ದೂರುದಾರರಿಗೆ ಹಾಗೂ ಅವರ ಜೊತೆಯಲ್ಲಿದ್ದ ಸಿದ್ದಲಿಂಗ ಪೂಜಾರಿ ಎಂಬುವವರಿಗೆ ಅತ್ಯಂತ ಕೀಳು ಮಟ್ಟದ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಲ್ಲದೆ, ಫೋನ್ನಲ್ಲಿಯೇ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ನೀಡಲು ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ, ಹಾಗರಗುಂಡಗಿ ಕ್ರಾಸ್ ಬಳಿ ಆರೋಪಿ ಸುಭಾಷನು ದೂರುದಾರ ಮಾಳಪ್ಪ ದಾರಿಗೆ ಅಡ್ಡ ಬಂದು ತಡೆದಿದ್ದಾನೆ. “ನನ್ನ ಮೇಲೆ ಕೇಸು ಹಾಕಿದರೆ ನಿನ್ನನ್ನು ಖಲ್ಲಾಸ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಘನತೆಗೆ ಧಕ್ಕೆ ತಂದಿರುವುದು ಮತ್ತು ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಫರಹತಾಬಾದ ಪೊಲೀಸರು ಆರೋಪಿ ಸುಭಾಷನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.























