ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಮೇಲ್

0
1

ಕಲಬುರಗಿ: ಸೇಡಂ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ತಿಳಿಸುವ ಅನಾಮಧೇಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರು ಯಾವುದೇ ಅಪಾಯ ಸಂಭವಿಸದಂತೆ ಕ್ರಮ ಕೈಗೊಂಡು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಚೇರಿಯಿಂದ ಹೊರಗಡೆ ಕಳುಹಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಘಟನೆಯ ಗಂಭೀರತೆಯನ್ನು ಮನಗಂಡು ಸ್ಥಳೀಯ ಪೊಲೀಸ್ ಠಾಣೆ, ಮೇಲಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಭದ್ರತಾ ಘಟಕಗಳಿಗೆ ತಕ್ಷಣವೇ ಮಾಹಿತಿ ರವಾನಿಸಿದರು.

ಸ್ಥಳಕ್ಕೆ ಡಾಗ್ ಸ್ಕ್ವಾಡ್, ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ತಜ್ಞರು ಆಗಮಿಸಿ ತಹಶೀಲ್ದಾರ್ ಕಚೇರಿ ಕಟ್ಟಡದ ಒಳಭಾಗ, ಹೊರಾಂಗಣ, ವಾಹನ ನಿಲುಗಡೆ ಪ್ರದೇಶ ಸೇರಿದಂತೆ ಸಂಪೂರ್ಣ ಆವರಣದಲ್ಲಿ ಸೂಕ್ಷ್ಮವಾಗಿ ಶೋಧ ಕಾರ್ಯ ನಡೆಸಿದರು.‌

ಸುಮಾರು ಹೊತ್ತು ನಡೆದ ಪರಿಶೀಲನೆಯ ಬಳಿಕ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿ ಸ್ವಲ್ಪ ಮಟ್ಟಿಗೆ ನಿರಾಳರಾದರೂ, ಘಟನೆಯಿಂದಾಗಿ ಕಚೇರಿಯ ದಿನನಿತ್ಯದ ಆಡಳಿತ ಕಾರ್ಯಗಳು ಕೆಲಕಾಲ ಅಸ್ತವ್ಯಸ್ತಗೊಂಡವು.

Previous articleರಾಜಶೇಖರ್ ಡಬಲ್ ಪೋಸ್ಟ್ ಮಾರ್ಟಂ: HDK ಸಮರ್ಥನೆ