Home ನಮ್ಮ ಜಿಲ್ಲೆ ಕಲಬುರಗಿ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆ ಬರಲ್ಲ

ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆ ಬರಲ್ಲ

0

ಕಲಬುರಗಿ: ಕಾಂಗ್ರೆಸ್ ಪಾಳಯದಲ್ಲಿ ಪ್ರಳಯ ಎದುರಾಗಿದ್ದು, ಯಾವುದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬೀಳಲಿದೆ. ಆದರೆ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆರುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಮೇಲ್ಮನೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಮಂಗಳವಾರ ಪಕ್ಷದ ಶಾಸಕರು, ಪ್ರಮುಖರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಶಾಸಕರನ್ನು ಖರೀದಿಸುವುದಾಗಲಿ, ಹೊಂದಾಣಿಕೆ ಮಾಡಿಕೊಂಡಾಗಲಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ, ಏನಿದ್ದರೂ ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎಂದು ಪುನರುಚ್ಚಿಸಿದರು.

ರಾಜ್ಯಪಾಲರಿಗೆ ಮನವಿ: ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿನ ಕಿತ್ತಾಟ ಬಹಿರಂಗಗೊಂಡ ಮೇಲೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ. ಇಡೀ ದೇಶದಲ್ಲಿ ಅತಿ ಹೆಚ್ಚು ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಆ ಪ್ರಸಂಗ ಎದುರಾಗಬಹುದು ಎಂದ ಅವರು, ಸದ್ಯ ಸರ್ಕಾರ ಅತಂತ್ರ ಸ್ಥಿತಿಯಲ್ಲಿದ್ದು ಕೋಮಕ್ಕೆ ಜಾರಿದೆ ಎಂದರು.

ರಾಜ್ಯದಲ್ಲಿ ಸಿಎಂ ಯಾರು?: ರಾಜ್ಯದಲ್ಲಿ ಮೂರು ದಿನಗಳಿಂದ ಮುಖ್ಯಮಂತ್ರಿ ಯಾರು? ಎನ್ನುವ ಪ್ರಶ್ನೆ ಎದ್ದಿದೆ. ಕಳೆದ ಎರಡು ವರ್ಷಗಳಿಂದ ಸಿದ್ದರಾಮಯ್ಯನವರೇ ನಾನೇ ಐದು ವರ್ಷ ಮುಖ್ಯಮಂತ್ರಿ, ಐದು ವರ್ಷ ಬಜೆಟ್ ಮಂಡಿಸುವುದೂ ನಾನೇ ಎಂಬ ಹೇಳಿಕೆಯಾಗಲಿ, ಸಿಎಲ್‌ಪಿ ಸಭೆ ಕರೆದು ಬಹುಮತ ಸಾಬೀತುಪಡಿಸಲಿ ಎನ್ನುವ ಮಾತು ಸಿಎಂ ಅವರ ಬಾಯಿಂದ ಈಗ ಬರುತ್ತಿಲ್ಲ. ಈಗ 136 ಕಾಂಗ್ರೆಸ್ ಶಾಸಕರು ದೆಹಲಿಯತ್ತ ಮುಖ ಮಾಡಿ, ಮಂತ್ರಿಗಿರಿಗಾಗಿ ಸರ್ಕಸ್ ನಡೆಸಿದ್ದು, ಆರು ಜನ ಸಚಿವರು ಡಿಸಿಎಂ ಪಟ್ಟಕ್ಕಾಗಿ ಟವೆಲ್ ಹಾಕಿದ್ದಾರೆ. ದೆಹಲಿಗೆ ತೆರಳುವ ಶಾಸಕರಿಗೆ ಮುಖ್ಯಮಂತ್ರಿಗಳು ಧಮ್ಕಿ ಹಾಕುತ್ತಿದ್ದಾರೆ. ಹೀಗಾಗಿ, ಶಾಸಕರ ಬೆಂಬಲ ಯಾರಿಗೆ ಇರುತ್ತದೆ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿದೆ. ಈ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಶಾಸಕರನ್ನು ಖರೀದಿಗೆ ಮುಂದಾಗಿದ್ದಾರೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version