ಹಾವೇರಿ: “ಎಲ್ಲಾ ಪಕ್ಷಗಳೂ ರಾಜಕಾರಣವನ್ನು ಪಕ್ಕಕ್ಕಿಟ್ಟು, ನಮ್ಮ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಲು ಒಗ್ಗಟ್ಟಾಗಿ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.
ಹಾವೇರಿಯಲ್ಲಿ ಬುಧವಾರ ನಡೆದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಇತ್ತೀಚೆಗೆ ನಾನು ದೆಹಲಿಗೆ ಹೋಗಿ ಬೇಡ್ತಿ ಹಾಗೂ ವರದಾ ನದಿ ಜೋಡಣೆ ವಿಚಾರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದೇನೆ. ಬೊಮ್ಮಾಯಿ ಅವರ ಮುಂದಾಳತ್ವದಲ್ಲಿ ಪ್ರಧಾನಮಂತ್ರಿಗಳ ಭೇಟಿಗೆ ಸಮಯ ನಿಗದಿ ಮಾಡಿ. ನಾವೂ ಬರುತ್ತೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸುವ ಬಗ್ಗೆ ಮನವಿ ಮಾಡೋಣ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹಿಂಪಡೆಯೋಣ. ಇನ್ನು ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪಿನ ಅನ್ವಯ ನೀರಿನ ಬಳಕೆಗೆ ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಕ್ಕರೆ ನೀವು ಮಾಡಿಕೊಂಡು ಬಂದಿರುವ ಹೋರಾಟಕ್ಕೆ ಮುಕ್ತಿ ಸಿಗುತ್ತದೆ. ಈ ಯೋಜನೆ ಸಂಬಂಧ ನಾವು ಈಗಾಗಲೇ ಟೆಂಡರ್ ಕರೆದಿದ್ದೇವೆ. ಗೋವಾ ರಾಜ್ಯದ ರಾಜಕಾರಣ ಬದಿಗಿಟ್ಟು ನಮ್ಮ ರಾಜ್ಯದ ಶಕ್ತಿಯನ್ನು ಪ್ರದರ್ಶಿಸಿ, ರೈತರು ಹಾಗೂ ಜನರ ಬದುಕಿನ ಬಗ್ಗೆ ಆಲೋಚಿಸೋಣ. ನಾವು ರಾಜಕೀಯವನ್ನು ಮುಂದಿನ ಎರಡೂವರೆ ವರ್ಷಗಳ ಬಳಿಕ ಮಾಡೋಣ. ಈಗ ರಾಜ್ಯದ ಜನರಿಗಾಗಿ ಕೃಷ್ಣ, ಮಹದಾಯಿ, ಕಾವೇರಿ ವಿಚಾರವಾಗಿ ಒಂದಾಗಿ ಕೆಲಸ ಮಾಡೋಣ” ಎಂದರು.
ಇದನ್ನೂ ಓದಿ: ನನ್ನ ಆಡಳಿತ ತೃಪ್ತಿ ತಂದಿದೆ: ಸಿದ್ದರಾಮಯ್ಯ
ಕೊಟ್ಟ ಮಾತಿನಂತೆ ನಡೆಯಬೇಕು: “ನಮಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ಪಾಪ, ಬೊಮ್ಮಾಯಿ ಅವರ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಮಾಡಿತು. ಆದರೆ ಇವತ್ತಿನವರೆಗೂ ಆ ಹಣ ಬಿಡುಗಡೆಯಾಗಿಲ್ಲ. ಬೊಮ್ಮಾಯಿ ಅವರೇ, ನಿರ್ಮಲಾ ಸೀತಾರಾಮನ್ ಹಾಗೂ ಮೋದಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ನಾನು ಈ ಹಿಂದೆ ‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’ ಎಂದು ಹೇಳಿದ್ದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕು. ನುಡಿದಂತೆ ನಡೆಯಬೇಕು. ಆಗ ನಾವು ನಾಯಕರು ಎಂದು ಕರೆಸಿಕೊಳ್ಳಲು ಸಾಧ್ಯ. ರಾಜಕಾರಣದಲ್ಲಿ ನಾವು ಎಷ್ಟು ದಿನ ಇರುತ್ತೇವೆ ಎಂಬುದು ಮುಖ್ಯವಲ್ಲ, ಇದ್ದಷ್ಟು ದಿನ ನಾವು ಹೇಗೆ ನಡೆದುಕೊಳ್ಳುತ್ತೇವೆ, ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ತಿಳಿಸಿದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಇಂಜಿನಿಯರ್, ವೈದ್ಯರ ತಯಾರಿ: “ಬಸವರಾಜ ಬೊಮ್ಮಾಯಿ ಅವರ ಸಹಕಾರ, ನಮ್ಮ ಸರ್ಕಾರ ಸೇರಿ ಇಂದು ಈ ಐತಿಹಾಸಿಕ ಕಾಲೇಜು ಆರಂಭಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದಲ್ಲಿ ನಮ್ಮ ರಾಜ್ಯ ದೊಡ್ಡ ಸಾಧನೆ ಮಾಡಿದೆ. ಈ ಸಾಧನೆಯನ್ನು ಎಲ್ಲರೂ ಸೇರಿ ಮಾಡಿದ್ದೇವೆ. 70 ಕಾಲೇಜುಗಳಿಂದ 13,945 ಮೆಡಿಕಲ್ ಸೀಟ್‌ಗಳಿದ್ದು, ಪ್ರತಿ ವರ್ಷ ಸಾವಿರಾರು ವೈದ್ಯರು ತಯಾರಾಗುತ್ತಿದ್ದಾರೆ. 750 ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. 3,405 ದಂತ ವೈದ್ಯರು, 1 ಸಾವಿರ ಸ್ನಾತಕೋತ್ತರ ಪದವಿದರರು, 44 ಸಾವಿರ ನರ್ಸಿಂಗ್ ಪದವೀಧರರು ತಯಾರಾಗುತ್ತಿದ್ದಾರೆ. 9,500 ಮಂದಿ ಆಯುರ್ವೇದ ವೈದ್ಯರು ತಯಾರಾಗುತ್ತಿದ್ದಾರೆ. ಆ ಮೂಲಕ ನಮ್ಮ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಸಿಬ್ಬಂದಿ ತಯಾರಾಗುತ್ತಿದ್ದು ಭಾರತದಲ್ಲೇ ಪ್ರಮುಖ ಪಾತ್ರ ವಹಿಸಿದೆ. ಇದೇ ಕರ್ನಾಟಕದ ಶಕ್ತಿ” ಎಂದರು.
“ವಿಶ್ವದ ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಂಯರಿಂಗ್ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ನಮ್ಮ ರಾಜ್ಯ ಇಂಜಿನಿಯರ್ ಹಾಗೂ ವೈದ್ಯರನ್ನು ತಯಾರು ಮಾಡುತ್ತಿದೆ. ನಿಮ್ಮಲ್ಲಿ ಬಹುತೇಕರು ರೈತರಿದ್ದೀರಿ. ನಿಮಗೆ ಶಕ್ತಿ ನೀಡಲು ನಾವು ಅನೇಕ ಯೋಜನೆ ಕೈಗೊಂಡಿದ್ದೇವೆ. ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಅವರದೇ ಆದ ಲೆಕ್ಕಾಚಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರವಾಗಿ ಎಕರೆಗೆ 25 ಲಕ್ಷ ದರ ನಿಗದಿ ಮಾಡಲಾಗಿತ್ತು. ನಮ್ಮ ಸರ್ಕಾರದ ಸಚಿವರು ಸೇರಿ ಇತ್ತೀಚೆಗೆ ಸಭೆ ಮಾಡಿ ರೈತರಿಗೆ 35-40 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ” ಎಂದರು.





















