ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದಿದ್ದರೆ ಉಗ್ರ ಹೋರಾಟ

0
20

ಹಾವೇರಿ(ಶಿಗ್ಗಾವಿ): ಶಿಗ್ಗಾವಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ, ರೈತ ಶಕ್ತಿ ದೊಡ್ಡದೋ ಅಧಿಕಾರದ ಶಕ್ತಿ ದೊಡ್ಡದಿದೆಯೋ ನಿರ್ಣಯ ಆಗಲೇಬೇಕು. ರೈತರ ಪರವಾಗಿ ಹಿಂದೆಯೂ ನಿಂತಿದ್ದೇನೆ. ಜೀವನದ ಕೊನೆವರೆಗೂ ನಿಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಧರಣಿ ಕುಳಿತಿರುವ ರೈತರನ್ನು ಭೇಟಿ ಮಾಡಿ ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಶಿಗ್ಗಾವಿ ತಾಲೂಕಿನಲ್ಲಿ ಶೇ. 80 ರಷ್ಟು ರೈತರು ಬೆಳೆಯುವ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಎಲ್ಲ ರೈತಪರ ಸಂಘಟನೆಗಳು ಹೋರಾಟ ಮಾಡುತ್ತಿರುವುದು ರೈತರ ಕಲ್ಯಾಣಕ್ಕಾಗಿ, ಈ ನಿಮ್ಮ ನ್ಯಾಯಸಮ್ಮತ ಹೋರಾಟಕ್ಕೆ ಬೇರೆ ಬೇರೆ ಬಣ್ಣ ಕೊಡಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಬಗ್ಗೆ ಚಿಂತೆ ಮಾಡಬೇಡಿ, ನಮ್ಮ ಹೃದಯದಲ್ಲಿ, ನಮ್ಮ ಮನಸ್ಸಿನಲ್ಲಿ ಹೊಲದಲ್ಲಿ ದುಡಿಯುವ ರೈತನ ಚಿತ್ರ ಇಟ್ಟುಕೊಂಡು ಹೋರಾಟ ಮಾಡೋಣ. ಇದರಲ್ಲಿ ರಾಜಕಾರಣ ಬೆರೆಸಿ ನಿಮ್ಮನ್ನು ಮುರಿಯುವ, ಒಡೆಯುವ ಪಯತ್ನ ಮಾಡುತ್ತಾರೆ. ರೈತರ ಜೊತೆ ಯಾರೂ ಇಲ್ಲ ಎಂದು ತಿಳಿದುಕೊಂಡಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ ರೈತರ ಜೊತೆಗೆ ಬಸವರಾಜ ಬೊಮ್ಮಾಯಿ ಇದ್ದಾನೆ. ರೈತರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ. ಎಲ್ಲ ಪಕ್ಷಗಳೂ ರೈತರ ಬೆಂಬಲದಿಂದ ಸರ್ಕಾರ ಆಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಸರ್ಕಾರದ ಜವಾಬ್ದಾರಿ: ಮೆಕ್ಕೆಜೋಳ ಶೇ. 80 ರಷ್ಟು ರೈತರು ಬೆಳೆಯುತ್ತಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಕೊಡುತ್ತಿದೆ. ಅದನ್ನು ಖರೀದಿ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರಗಳು ಮೆಕ್ಕೆಜೋಳ, ಕಬ್ಬು, ಭತ್ತ ಖರೀದಿ ಮಾಡಿವೆ. ನೀವು ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಲು ಸಭೆ ಮಾಡಿದ್ದೀರಿ. ಆದರೆ, ಇಪತ್ತು ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರ ಬಗ್ಗೆ ಒಂದು ಸಣ್ಣ ಸಭೆ ಮಾಡಲಿಲ್ಲ. ಅವರನ್ನು ಕರೆಯಲೂ ಇಲ್ಲ. ನೀವೇ 10 ಲಕ್ಷ ಮೆಟ್ರಿಕ್ ಟನ್ ಖರೀದಿಸುವುದಾಗಿ ಹೇಳಿದ್ದೀರಿ. ಈ ರಾಜ್ಯದಲ್ಲಿ 16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ನಾನು ಲಕ್ಷೇಶ್ವರದಲ್ಲಿ ಆರಂಭದಲ್ಲಿ ಈ ಸರ್ಕಾರ ನಂಬಬೇಡಿ ಅಂಥ ಹೇಳಿದ್ದೆ. ಅಧಿವೇಶನ ಇರುವ ಸಲುವಾಗಿ ಖರೀದಿ ಮಾಡುವುದಾಗಿ ಹೇಳಿದ್ದರು. ರೈತರಿಗೆ ಆರ್ಥಿಕವಾಗಿ ಸಂಕಷ್ಟ ಇರುತ್ತದೆ. ಎಥೆನಾಲ್ ಕಂಪನಿಯವರು ರೈತರಿಂದ ನೇರವಾಗಿ ಖರೀದಿಸದೇ ಮಧ್ಯವರ್ತಿಗಳ ಕಡೆಯಿಂದ ಖರೀದಿಸುತ್ತಿದ್ದಾರೆ. ಈ ಸರ್ಕಾರ ಯಾರ ಪರವಾಗಿದೆ. ಎಥೆನಾಲ್ ಫ್ಯಾಕ್ಟರಿ ಪರವಾಗಿದ್ದಾರಾ, ರೈತರಿಂದ ನೇರವಾಗಿ ಖರೀದಿಸುವಂತೆ ಹೇಳಲು ಇವರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.

ಶಿಗ್ಗಾವಿಯಲ್ಲಿ ಖರೀದಿ ಕೇಂದ್ರ ಆಗಲೇಬೇಕು. ಹಾನಗಲ್, ಶಿಗ್ಗಾವಿ, ಸವಣೂರು ತಾಲೂಕುಗಳಲ್ಲಿ ಶೇ. 80 ರಷ್ಟು ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ನಾವು ರೈತರ ಪರವಾಗಿ ಮಾತನಾಡುವ ನೈತಿಕ ಹಕ್ಕು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಮೆಕ್ಕೆಜೋಳದ ಬೆಲೆ ಬಿದ್ದು ಹೋಗಿತ್ತು. ಆಗ ಇದೇ ಶಿಗ್ಗಾವಿ ಎಪಿಎಂಸಿಯಲ್ಲಿ ರೈತರ ಕೊನೆ ಮೆಕ್ಕೆಜೋಳದ ಕಾಳಿನವರೆಗೂ ಖರೀದಿ ಮಾಡಿದ್ದೇವು. ಏಜೆಂಟರು ಬಂದಿದ್ದರು ಅವರನ್ನು ಬಂಧಿಸಿದ್ದೇವು. 2008ರಲ್ಲಿ ಗೊಬ್ಬರ ಸಮಸ್ಯೆ ಬಂದಾಗ ಹೆಚ್ಚಿನ ಗೊಬ್ಬರ ತರೆಯಿಸಿ ನಾನೇ ನಿಂತು ಹಂಚಿಕೆ ಮಾಡಿಸಿದ್ದೆ. ಈ ವರ್ಷವೂ ನಾವು ಗೊಬ್ಬರ ಹಂಚುವ ಕೆಲಸ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸಲಿದ್ದಾರೆ

ನಾನು ಡಿಸಿ ಜೊತೆಗೆ ಸಭೆ ಮಾಡಿ ಶಿಗ್ಗಾವಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ದಿನಾಂಕ ಘೋಷಣೆ ಮಾಡುವಂತೆ ಹೇಳುತ್ತೇನೆ. ಶಿಗ್ಗಾವಿಯಲ್ಲಿ ಖರೀದಿ ಕೇಂದ್ರ ಆಗಲೇಬೇಕು. ಅಲ್ಲಿಯವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ. ರೈತ ಶಕ್ತಿ ದೊಡ್ಡದೋ ಅಧಿಕಾರದ ಶಕ್ತಿ ದೊಡ್ಡದಿದೆಯೋ ನಿರ್ಧಾರ ಆಗಬೇಕು. ನಾನು ರೈತರ ಪರವಾಗಿ ಹಿಂದೆಯೂ ನಿಂತಿದ್ದೇನೆ. ಜೀವನದ ಕೊನೆವರೆಗೂ ನಿಲ್ಲುತ್ತೇನೆ ಎಂದು ಹೇಳಿದರು.

ಶಿಗ್ಗಾವಿಯಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬೆಳೆದಿದ್ದಾರೆ. ಬೇರೆ ಯಾವದು ಬೆಳೆ ಬಂದಿಲ್ಲ. ಬೇಳೆ ಪರಿಹಾರವನ್ನು ಕೊಟ್ಟಿಲ್ಲ. ಇನ್ಸುರೆನ್ಸ್ ನಲ್ಲಿಯೂ ಅನ್ಯಾಯ ಆಗಿದೆ. ಶಿಗ್ಗಾವಿ ತಹಸೀಲ್ದಾರ್ ಸರ್ಕಾರಕ್ಕೆ ಕೂಡಲೆ ವರದಿ ಸಲ್ಲಿಸಿ ದಿನಾಂಕ ಘೋಷಣೆ ಮಾಡಲು ಹೇಳಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ. ಈ ಕುರಿತು ಕೃಷಿ ಸಚಿವರೊಂದಿಗೂ ಮಾತನಾಡುತ್ತೇನೆ. ರೈತರ ಪರವಾಗಿ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ವರದಿ ಕೊಟ್ಟು ನ್ಯಾಯದ ಪರವಾಗಿ ನಡೆದುಕೊಳ್ಳುವಂತೆ ತಹಶೀಲ್ದಾ‌ರ್ ಅವರಿಗೆ ಆಗ್ರಹಿಸಿದರು.

Previous articleಹೊಸ ವರ್ಷಾಚರಣೆ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
Next articleINSV Kaundinya: ಓಮನ್‌ಗೆ ಪ್ರಯಾಣ ಬೆಳೆಸಿದ ನೌಕಾಪಡೆಯ ಹಡಗು