ಹಾವೇರಿ: ಶಿಗ್ಗಾವಿ ತಾಲೂಕಿನಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇತ್ತಿಚೆಗೆ ನಡೆದ ಪರೀಕ್ಷೆಯ ಫಲಿತಾಂಶದಲ್ಲಿ ಹೊಸ ದಾಖಲೆ ಬರೆದಿದೆ. ಪರೀಕ್ಷೆ ಮುಗಿದ ಮೂರೇ ಗಂಟೆಗಳಲ್ಲಿ ಆರು ವಿಭಾಗಗಳ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸುವ ಮೂಲಕ ವಿಶ್ವವಿದ್ಯಾಲಯ ಗಮನ ಸೆಳೆದಿದೆ.
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00ರವರೆಗೆ ಮತ್ತು ನಂತರ ಮಧ್ಯಾಹ್ನ 2.00 ರಿಂದ ಸಂಜೆ 5.00ರವರೆಗೆ ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಒಟ್ಟು 320 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಪರೀಕ್ಷೆ ಮುಗಿದ ಬಳಿಕ ತ್ವರಿತ ಮೌಲ್ಯಮಾಪನ ನಡೆಸಲಾಗಿದ್ದು, ಅಂಕಗಳನ್ನು UUCMS (University Unified Information Management System) ತಂತ್ರಾಂಶದಲ್ಲಿ ದಾಖಲಿಸಿ ತಕ್ಷಣವೇ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕುಲಸಚಿವ ಡಾ. ಶಿವಶಂಕರ್ ಕೆ. ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಮೆಚ್ಚುಗೆ – ಬದಲಾದ ವ್ಯವಸ್ಥೆಯ ನೆರಳು: ಈ ಹಿಂದೆ ಪರೀಕ್ಷಾ ಫಲಿತಾಂಶ ಪ್ರಕಟಿಸಲು ವಾರಗಳು ಅಥವಾ ತಿಂಗಳುಗಳ ಕಾಲ ತಡವಾಗುತ್ತಿದ್ದರೆ, ಈಗ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ನೀಡಿರುವುದು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಸಂತಸ ಮೂಡಿಸಿದೆ. ವಿಶ್ವವಿದ್ಯಾಲಯದ ಕಾರ್ಯವೈಖರಿ ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳಲ್ಲಿಯೂ ಮಾದರಿಯಾಗಿದೆ.
ಪೂರ್ವ ತಯಾರಿಯೇ ಯಶಸ್ಸಿನ ವೇಗ: 2024-25ನೇ ಸಾಲಿನ ಎರಡನೇ ಹಾಗೂ ನಾಲ್ಕನೇ ಚತುರ್ಮಾಸದ ಪರೀಕ್ಷೆಗೂ ಮುನ್ನ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಮತ್ತು ಕುಲಸಚಿವರು ಉಪನ್ಯಾಸಕರೊಂದಿಗೆ ಸಭೆ ನಡೆಸಿ, ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿದ್ದರು. ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಶ್ವವಿದ್ಯಾಲಯವು ಯಶಸ್ವಿಯಾಗಿದೆ. ಒಟ್ಟು 460 ವಿದ್ಯಾರ್ಥಿಗಳ ಫಲಿತಾಂಶ ಈಗಾಗಲೇ ಪ್ರಕಟಿಸಲಾಗಿದೆ. ವಿದ್ಯಾವಿಭಾಗಗಳಾದ: ಜನಪದ ಸಾಹಿತ್ಯ. ಪತ್ರಿಕೋದ್ಯಮ ಮತ್ತು ಸಂವಹನ. ಕನ್ನಡ ಮತ್ತು ಜಾನಪದ. MBA ಪ್ರವಾಸೋದ್ಯಮ. ಎಂಎ ಜನಪದ ಹಾಗೂ ವಿಜ್ಞಾನ ವಿಭಾಗ. ಇವುಗಳ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಫಲಿತಾಂಶವನ್ನು ಪ್ರಕಟಿಸಲಾಗಿದೆ.
“ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸಿರುವುದು ವಿಶ್ವವಿದ್ಯಾಲಯದ ಸಂಕಲ್ಪ ಮತ್ತು ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಇದು ನಮ್ಮ ವಿಶ್ವವಿದ್ಯಾಲಯದ ಹೆಮ್ಮೆ ಹಾಗೂ ಇತರೆ ವಿಶ್ವವಿದ್ಯಾಲಯಗಳಿಗೆ ಮಾದರಿ” ಎಂದು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರಿಂದ ಈ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


























