ಹಾವೇರಿ: ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಗಂಭೀರ ನಿರ್ಲಕ್ಷ್ಯದಿಂದ ನವಜಾತ ಶಿಶುವೊಂದು ಜೀವ ಕಳೆದುಕೊಂಡ ದಾರುಣ ಘಟನೆ ಮಂಗಳವಾರ (ನವೆಂಬರ್ 18) ಬೆಳಿಗ್ಗೆ ನಡೆದಿದೆ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಸರಿಯಾದ ಚಿಕಿತ್ಸೆ ಕೊಡದೆ, ಒಂದು ಗಂಟೆ ಕಾಲ ನೆಲದ ಮೇಲೆಯೇ ಕುಳ್ಳಿರಿಸಿದ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಇದೀಗ ವ್ಯಾಪಕವಾದ ಆಕ್ರೋಶಕ್ಕೆ ಕಾರಣವಾಗಿದೆ.
ಕಾಕೋಳ ಗ್ರಾಮದ ರೂಪಾ ಗಿರೀಶ್ ಕರಬಣ್ಣ (30) ಅವರನ್ನು ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕುಟುಂಬದವರು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆತರಿದ್ದರು. ಆದರೆ, ಆಸ್ಪತ್ರೆಗೆ ಬಂದ ಕೂಡಲೇ ತಕ್ಷಣ ಬೆಡ್ ನೀಡಬೇಕಿದ್ದ ಸಿಬ್ಬಂದಿ ಅವರು, ಬದಲಿಗೆ “ಜಾಗ ಇಲ್ಲ” ಎಂಬ ನೆಪ ಹೇಳಿ ರೂಪಾರನ್ನು ನೆಲದ ಮೇಲೆಯೇ ಕುಳ್ಳಿರಿಸಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ಇಷ್ಟೇ ಅಲ್ಲ, ಶೌಚಾಲಯ ಎಲ್ಲಿದೆ ಎಂಬುದಕ್ಕೂ ಸಿಬ್ಬಂದಿ ಯಾವುದೇ ಸ್ಪಷ್ಟ ಮಾಹಿತಿ ನೀಡಲಿಲ್ಲ. ಕೊನೆಗೆ ಸಂಬಂಧಿಕರು ವಿಚಾರಿಸಿ ಶೌಚಾಲಯದ ದಾರಿಯನ್ನು ತೋರಿಸಿಕೊಂಡು ರೂಪಾಳನ್ನು ಕರೆದುಕೊಂಡು ಹೋಗುವ ವೇಳೆ—ಮಾರ್ಗ ಮಧ್ಯೆಯೇ ಅವರಿಗೆ ಹೆರಿಗೆ ಆಗಿದೆ. ಆ ಸಮಯದಲ್ಲಿ ಹುಟ್ಟಿದ ಮಗು ಪೆಟ್ಟಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದೆ.
ಮಹಿಳೆ ಉಸಿರಾಡಲೂ ಕಷ್ಟವಾಗುವಂತೆ ನೋವಿನಿಂದ ಕೂಗುತ್ತಿದ್ದರೂ, ಅಲ್ಲಿದ್ದ ವೈದ್ಯರು ಹಾಗೂ ನರ್ಸ್‌ಗಳು ಮೊಬೈಲ್ ಫೋನ್‌ನಲ್ಲಿ ಮಾತನಾಡುವುದಲ್ಲೇ ಬ್ಯುಸಿಯಾಗಿದ್ದರು ಎಂದು ಆರೋಪಿಸಲಾಗಿದೆ. “ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಮಗು ಬದುಕುತ್ತಿತ್ತು,” ಎಂದು ರೂಪಾ ಅವರ ಬಂಧುಗಳು ಕಣ್ಣೀರಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಂತರ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು, ಹಲವರು ಆಸ್ಪತ್ರೆ ಆಡಳಿತದಿಂದ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.


























