ಹಾವೇರಿ: ವರದಾ – ಬೆಡ್ತಿ ನದಿ ಯೋಜನೆ ಜಾರಿಗೆ ಜನಜಾಗೃತಿ ಮೂಡಿಸಲು ಹಾವೇರಿ ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಜನರನ್ನು ಸೇರಿಸಿ ಜಾಗೃತಿ ಸಮಾವೇಶ ಮಾಡಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳನ್ನು ಉಳಿಸಿ, ವರದಾ – ಬೇಡ್ತಿ ವಿರೋಧಿಸಿ ಅಭಿಯಾನ ನಡೆಸುತ್ತಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ವರದಾ – ಬೆಡ್ತಿ ನದಿ ಜೋಡಣೆ ಯೋಜನೆ ಇಂದಿನದಲ್ಲ. 1994 ರಿಂದಲೇ ಇದೆ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೆಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುತ್ತಿದ್ದೇವೆ, ಯಾವುದೇ ನೀರಿನ ನಷ್ಟ ಆಗುವುದಿಲ್ಲ. ರಾಜ್ಯ ಸರ್ಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಹೇಳಿದರು.
ಇದನ್ನೂ ಓದಿ: ಸಂಕ್ರಾಂತಿ ನಂತರ ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ
ಚರ್ಚೆಗೆ ಸಿದ್ಧ: ಈ ವಿಚಾರವಾಗಿ ಮುಕ್ತವಾಗಿ ಚರ್ಚಿಸಲು ವಾಟರ್ ಎಕ್ಸಪರ್ಟ್, ಪರಿಸರ ವಿಜ್ಞಾನಿಗಳನ್ನು ಕರೆಯಲಿ, ಸೌಹಾರ್ದಯುತ ನಿರ್ಣಯ ತೆಗದುಕೊಳ್ಳಬೇಕು. ನಮ್ಮ ಕಡೆ ಬರಗಾಲ ಇದೆ. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದೆ. ಡಿಪಿಆರ್ ಆದ ಬಳಿಕ ರಾಜ್ಯ ಸರ್ಕಾರ ಸಭೆ ಕರೆಯಲಿ. ಯಾವುದೇ ನದಿ ನಿಂತ ನೀರಲ್ಲ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಆಂಧ್ರಪ್ರದೇಶ, ಕರ್ನಾಟಕದಲ್ಲಿ ಹರಿಯುತ್ತದೆ. ಬರಿ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ. ವರದಾ – ಬೆಡ್ತಿ ಯೋಜನೆ ಆಗಲೇಬೇಕಿದೆ, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲವನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಅದಕ್ಕಾಗಿ ನಾವು ಹಾವೇರಿಯಲ್ಲಿ ಮಠಾಧೀಶರು, ರಾಜಕೀಯ ನಾಯಕರು ಎಲ್ಲರನ್ನೊಳಗೊಂಡ ಸಭೆ ಕರೆಯುತ್ತೇವೆ. ಜನ ಜಾಗೃತಿ, ಜನಾಭಿಪ್ರಾಯ, ಸಮಾವೇಶ ಮಾಡುವ ಮೂಲಕವೂ ಮಾಡುತ್ತೇವೆ ಎಂದು ಹೇಳಿದರು.






















