–ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಗ್ಯಾರಂಟಿ ಯೋಜನೆಗಳ ಸಮರ್ಥನೆ
ಹಾವೇರಿ: ಹಾವೇರಿ ಜಿಲ್ಲೆಗೆ ಇಂದು ಒಂದು ಸುಧಿನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಕಾಲೇಜನ್ನು ನಾನು ಹಿಂದಿನ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಘೋಷಣೆ ಮಾಡಿದ್ದೆ. ಇಂದು ಅದನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದು ಅತ್ಯಂತ ಸಂತೋಷದ ವಿಚಾರ” ಎಂದು ಭಾವೋದ್ವೇಗದಿಂದ ಹೇಳಿದರು.
ಕರ್ನಾಟಕದಲ್ಲಿ ಒಟ್ಟು 71 ಮೆಡಿಕಲ್ ಕಾಲೇಜುಗಳಿದ್ದು, ಅದರಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿವೆ ಎಂದು ವಿವರಿಸಿದ ಸಿಎಂ, ವಿಜಯಪುರದಲ್ಲೂ ಹೊಸ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಭರವಸೆ ನೀಡಿದರು. ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, “ಮುಂದಿನ ದಿನಗಳಲ್ಲಿ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡೋಣ” ಎಂದು ಘೋಷಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ಬಡವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, “ನಾವು ಯಾರಿಗೂ ಭೇದಭಾವ ಮಾಡುವುದಿಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜನರಿಗೆ ಶಕ್ತಿ ತುಂಬುವುದೇ ನಮ್ಮ ಸರ್ಕಾರದ ಕರ್ತವ್ಯ” ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಸಮರ್ಥನೆ: ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಬಂಧಿಸಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ ಸರ್ಕಾರ ದಿವಾಳಿ ಆಗುತ್ತದೆ ಎಂದು ಕೆಲವರು ಹೇಳಿದರು. ಆದರೆ ಈಗಾಗಲೇ ₹1 ಲಕ್ಷ 12 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದರೂ ರಾಜ್ಯ ಆರ್ಥಿಕವಾಗಿ ದಿವಾಳಿ ಆಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಾಯ್ಲರ್ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಆರು ಮಂದಿಗೆ ಗಂಭೀರ ಗಾಯ
ಹಾವೇರಿ ಮೆಡಿಕಲ್ ಕಾಲೇಜಿಗೆ ₹500 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ ಸಿಎಂ, ಈ ಯೋಜನೆಗೆ ನೆರವು ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ನೀರಾವರಿ ಮತ್ತು ರಾಜಕೀಯ ಟಿಪ್ಪಣಿ: ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಈ ಯೋಜನೆ ಪೂರ್ಣಗೊಳ್ಳಲೇಬೇಕು. ಇಲ್ಲದಿದ್ದರೆ ನಮಗೆ ಅಲಾಟ್ ಆಗಿರುವ ನೀರು ಬೇರೆ ರಾಜ್ಯಗಳಿಗೆ ಹೋಗುತ್ತದೆ. ಅಲಾಟ್ ಆಗಿರುವ ನೀರನ್ನು ನಾವು ಬಳಸಿಕೊಳ್ಳಬೇಕು” ಎಂದು ಹೇಳಿದರು. ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಸಕ್ತಿ ವಹಿಸಲಿ ಎಂದು ಆಹ್ವಾನ ನೀಡಿದ ಅವರು, “ನಿಮ್ಮ ಅಧ್ಯಕ್ಷತೆಯಲ್ಲಿ ದೆಹಲಿಗೆ ಹೋಗೋಣ, ಕಾನೂನು ಅಭಿಪ್ರಾಯದಂತೆ ಕೆಲಸ ಮಾಡೋಣ” ಎಂದರು.
ಇದೇ ವೇಳೆ, “ಬೊಮ್ಮಾಯಿ ಅವರು ಬಿಜೆಪಿ ಸೇರುವ ಮುಂಚೆ ನನ್ನ ಜೊತೆ ಚೆನ್ನಾಗಿದ್ದರು” ಎಂಬ ಮಾತು ವೇದಿಕೆಯಲ್ಲಿ ಸ್ವಲ್ಪ ರಾಜಕೀಯ ಚರ್ಚೆಗೆ ಕಾರಣವಾಯಿತು.
ಧರ್ಮ, ಸಂಸ್ಕೃತಿ ಮತ್ತು ಶಕ್ತಿ: ಯಾವುದೇ ಧರ್ಮ ಪ್ರೀತಿ ಕಲಿಸುತ್ತದೆ, ದ್ವೇಷವಲ್ಲ ಎಂಬ ನಂಬಿಕೆ ನಮ್ಮದಲ್ಲಿದೆ ಎಂದು ಹೇಳಿದ ಸಿಎಂ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದನ್ನು ಸ್ಮರಿಸಿದರು. ಜೊತೆಗೆ, “Word Power is World Power” ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.






















