ವೈಜ್ಞಾನಿಕ ಮನೋಭಾವವೇ ವಿಜ್ಞಾನದ ಗುರಿ: ಸಿ ಎಂ ಸಿದ್ದರಾಮಯ್ಯ

0
5

ಹಾವೇರಿ / ಲಕ್ಷ್ಮೇಶ್ವರ: ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಮೌಢ್ಯ ಮತ್ತು ಕಂದಾಚಾರಗಳನ್ನು ಆಚರಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಸಮಾಜವು ಮುಂದುವರೆಯಬೇಕಾದರೆ ಮೌಢ್ಯತೆಗಳಿಗೆ ಸಂಪೂರ್ಣವಾಗಿ ಅಂತ್ಯ ಹಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ 10ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ ಹಾಗೂ 2025ನೇ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಾತೃತ್ವ, ಸ್ವಾತಂತ್ರ್ಯ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ಸಂವಿಧಾನ ನಮಗೆ ನೀಡಿದೆ. ಆದರೆ ಅವು ಅಕ್ಷರಶಃ ಜಾರಿಯಾಗದಿದ್ದರೆ ಜಾತಿ ವ್ಯವಸ್ಥೆ ಮತ್ತು ಅಸಮಾನತೆಗಳು ಎಂದಿಗೂ ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣವೇ ವ್ಯಕ್ತಿತ್ವ ನಿರ್ಮಾಣದ ಮೂಲ: ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅತ್ಯಂತ ಅಗತ್ಯ. ಶಿಕ್ಷಣವೆಂಬುದು ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಪ್ರಾಮಾಣಿಕ ಪ್ರಯತ್ನ, ಇಚ್ಛಾಶಕ್ತಿ ಮತ್ತು ದೊರಕುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಯಾವುದೇ ವರ್ಗದವರಾದರೂ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಗುಡ್‌ನ್ಯೂಸ್‌: ಶೀಘ್ರದಲ್ಲಿಯೇ 24,300 ಹುದ್ದೆಗಳ ಭರ್ತಿ

ಎಲ್ಲಾ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸಿ ಸಮಾಜವನ್ನು ದಾರಿ ತಪ್ಪಿಸುತ್ತಿವೆ ಎಂದು ಅವರು ಎಚ್ಚರಿಸಿದರು. ಕಷ್ಟವನ್ನು ಕೇವಲ ಹಣೆಬರಹವೆಂದು ಒಪ್ಪಿಕೊಳ್ಳದೆ, ಶ್ರಮ ಮತ್ತು ದೃಢ ಇಚ್ಛಾಶಕ್ತಿಯಿಂದ ಎದುರಿಸಿದರೆ ಸಾಧನೆ ಸಾಧ್ಯವೆಂದು ತಿಳಿಸಿದರು.

ವೈಜ್ಞಾನಿಕ ಮನೋಭಾವವೇ ವಿಜ್ಞಾನದ ಗುರಿ: ವಿಜ್ಞಾನದ ಉದ್ದೇಶವೇ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಸಮಾಜದಲ್ಲಿ ಅಳವಡಿಸುವುದಾಗಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕೂಡ ಪ್ರತಿಯೊಬ್ಬರೂ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದರು ಎಂದು ಮುಖ್ಯಮಂತ್ರಿ ನೆನಪಿಸಿದರು. ಚಂದನ ಶ್ರೀ ವಿದ್ಯಾಲಯದಲ್ಲಿ ವಿಜ್ಞಾನ ಮತ್ತು ವೈಚಾರಿಕತೆಗೆ ಹೆಚ್ಚು ಒತ್ತು ನೀಡಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿ.ಎಸ್. ಪಾಟೀಲರ ಸೇವೆಗೆ ಶ್ಲಾಘನೆ: ತಮ್ಮ ಭಾಷಣದಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲರ ಜೀವನ ಪಥವನ್ನು ಸ್ಮರಿಸಿದ ಮುಖ್ಯಮಂತ್ರಿ, ರೈತ ಕುಟುಂಬದಿಂದ ಬಂದ ಅವರು ವಿದ್ಯಾಭ್ಯಾಸ ಮಾಡಿ ಸೈನ್ಯ ಸೇರಿ, ಅಪಘಾತದಂತಹ ಸಂಕಷ್ಟಗಳ ನಡುವೆಯೂ ಐಎಎಸ್ ಪರೀಕ್ಷೆ ಉತ್ತೀರ್ಣರಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾದುದು ಅಪರೂಪದ ಸಾಧನೆ ಎಂದರು.

ನಾಡಿನ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿರುವ ಪಾಟೀಲರನ್ನು ಗುರುತಿಸಿ ಚಂದನ ಎಜುಕೇಶನಲ್ ಸಂಸ್ಥೆ ಚಂದನ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: 2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು

ಸಿ.ಎನ್.ಆರ್. ರಾವ್ ಅಪರೂಪದ ವಿಜ್ಞಾನಿ: ಭಾರತ ಕಂಡ ಅತ್ಯಂತ ಅಪರೂಪದ ವಿಜ್ಞಾನಿಗಳಲ್ಲಿ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಒಬ್ಬರು ಎಂದು ಸಿದ್ದರಾಮಯ್ಯ ಹೇಳಿದರು. ಅವರು ಎಸ್‌ಎಸ್‌ಎಲ್‌ಸಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತು, ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದ್ದಾರೆ. ಸಂಶೋಧನೆಯನ್ನೇ ಜೀವನವಾಗಿಸಿಕೊಂಡಿದ್ದ ಅವರಿಗೆ ಅವರ ಧರ್ಮಪತ್ನಿ ಸದಾ ಬೆಂಬಲವಾಗಿ ನಿಂತಿದ್ದರು ಎಂದು ಮುಖ್ಯಮಂತ್ರಿ ಸ್ಮರಿಸಿದರು.

Previous articleಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಸಂಸದ ಬಿ.ವೈ. ರಾಘವೇಂದ್ರ ಮನವಿ