ಬೆಳೆ ನಷ್ಟ ಪರಿಹಾರ – ಮೆಕ್ಕೆಜೋಳ ಖರೀದಿ ಮತ್ತು ಕಬ್ಬಿನ ದರ ಜಾರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ
ಹಾವೇರಿ: ಹಾವೇರಿ ಜಿಲ್ಲೆಯ ರೈತರು ಸತತ ಮಳೆಯಿಂದಾಗಿ ಭಾರಿ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಮೆಕ್ಕೆಜೋಳ, ಹೆಸರು, ಸೋಯಾಬಿನ್ ಸೇರಿದಂತೆ ಪ್ರಮುಖ ಬೆಳೆಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೊಮ್ಮಾಯಿ ಅವರು ಈ ಕುರಿತಂತೆ ಪೋಸ್ಟ್ ಮಾಡಿ ರೈತರ ಬೇಡಿಕೆಯಂತೆ ಮೆಕ್ಕೆಜೋಳವನ್ನು ಎಂಎಸ್‌ಪಿಗಿಂತ ಹೆಚ್ಚಿನ ದರದಲ್ಲಿ ಖರೀದಿಸಬೇಕು. ಇಲ್ಲದಿದ್ದರೆ ಕಬ್ಬಿನ ದರಕ್ಕಾಗಿ ನಡೆದ ಹೋರಾಟದಂತೆಯೇ ರೈತರು ಮತ್ತೆ ಬೀದಿಗಿಳಿಯುವುದು ಅನಿವಾರ್ಯ” ಎಂದು ಎಚ್ಚರಿಸಿದ್ದಾರೆ.
“ಕಬ್ಬಿಗೆ ನ್ಯಾಯಸಮ್ಮತ ದರ ಇನ್ನೂ ದೊರೆತಿಲ್ಲ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಪ್ರತಿ ಟನ್‌ಗೆ ₹3,300 ದರವನ್ನು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ತಕ್ಷಣ ಜಾರಿಗೆ ತರಬೇಕು. ಬೆಳೆ ನಷ್ಟ ಸರ್ವೆಯಲ್ಲಿ ಅನ್ಯಾಯ ನಡೆದಿದೆ; ಅನೇಕ ಸ್ಥಳಗಳಲ್ಲಿ ರೈತರಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರ ತಕ್ಷಣ ಮರುಸರ್ವೆ ಮಾಡಿ ನಷ್ಟ ಪರಿಹಾರ ಘೋಷಿಸಬೇಕು.”
ಬೊಮ್ಮಾಯಿ ಅವರು ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಕೆಎಂಎಫ್‌ಗೆ ನೇರ ಖರೀದಿಯ ಅಧಿಕಾರ ನೀಡಬೇಕು ಎಂದಿದ್ದಾರೆ. ರಾಜ್ಯದಲ್ಲಿ ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದು, 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆಯಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆದಿರುವ ರೈತರ ರಕ್ಷಣೆಯ ಹೊಣೆ ಸರ್ಕಾರದ ಮೇಲಿದೆ ಎಂದು ಅವರು ಒತ್ತಾಯಿಸಿದರು.
“ನಾನು ಈಗಾಗಲೇ ಕಬ್ಬಿನ ದರದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಸಕ್ಕರೆ ಸಚಿವರೂ ಮಧ್ಯಪ್ರವೇಶ ಮಾಡಿ ಈ ಸಮಸ್ಯೆ ಬಗೆಹರಿಸಬೇಕು,” ಎಂದು ಮಾಜಿ ಸಿಎಂ ಬೊಮ್ಮಾಯಿ ಆಗ್ರಹ ವ್ಯಕ್ತಪಡಿಸಿದ್ದಾರೆ.


























