ಹಾವೇರಿ: ಸಿನಿಮಾ ಶೈಲಿಯಲ್ಲಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಖತರ್‌ನಾಕ್ ಕಳ್ಳಿ ಕೊನೆಗೂ ಸಿಕ್ಕಿಬಿದಿದ್ದಾಳೆ.
ಚಿನ್ನದಂಗಡಿಯಲ್ಲಿ ನಕಲಿ ಚಿನ್ನಾಭರಣ ಇಟ್ಟು ಅಸಲಿ ಬಂಗಾರದ ಆಭರಣವನ್ನು ಎಗರಿಸುತ್ತಿದ್ದ, ಮೂಲತಃ ಹುಬ್ಬಳ್ಳಿ ನವನಗರ ನಿವಾಸಿಯಾಗಿರುವ ಶ್ರೀದೇವಿ ಕಟ್ಟೆಕಾರ (30) ಎಂಬಾಕೆ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.
ಬ್ರ್ಯಾಂಡ್ ಜ್ಯುವೆಲರ್ಸ್ ಮಳಿಗೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈಕೆ ನಕಲಿ ಚಿನ್ನಾಭರಣ ಮತ್ತು ಕೃತಕ QR ಕೋಡ್ ಸೃಷ್ಟಿಸಿ, ಮಗು ಜತೆಯಲ್ಲಿ ಐಷಾರಾಮಿ ಕಾರಿನಲ್ಲಿಯೇ ಅಂಗಡಿಗಳಿಗೆ ಬರುತ್ತಿದ್ದಳು.
ಇದನ್ನೂ ಓದಿ: ಗಗನಯಾನಕ್ಕೆ ಮೈಲಿಗಲ್ಲು: DRDO Parachute ಯಶಸ್ವಿ ಪರೀಕ್ಷೆ
ಚಿನ್ನದ ಅಂಗಡಿಯಲ್ಲಿ ಆಭರಣಗಳನ್ನು ವೀಕ್ಷಿಸುತ್ತ ತನ್ನಲ್ಲಿದ್ದ ನಕಲಿ ಚಿನ್ನವನ್ನು ಅಸಲಿ ಚಿನ್ನದ ಜತೆ ಚಾಣಾಕ್ಷತನದಿಂದ ಬದಲಾಯಿಸುತ್ತಿದ್ದಳು. ಅಷ್ಟೇ ಅಲ್ಲ, ಅಲ್ಲಿ ಕದ್ದ ಚಿನ್ನವನ್ನು ಅದೇ ದಿನವೇ ಮತ್ತೊಂದು ನಗರಕ್ಕೆ ಹೋಗಿ ಮಾರಾಟ ಮಾಡುತ್ತಿದ್ದಳು.
ಹೀಗೆ ಹಾವೇರಿಯ ಬೆನಕ ಗೋಲ್ಡ್ ಅಂಗಡಿಯಲ್ಲಿ ಚಿನ್ನ ಮಾರಾಟಕ್ಕೆ ಬಂದಾಗ ಆಕೆಯ ಮೇಲೆ ಸಂಶಯ ವ್ಯಕ್ತವಾಗಿದ್ದು, ಅಂಗಡಿಯಲ್ಲಿದ್ದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಆಕೆ ಶಿವಮೊಗ್ಗದ ಭೀಮಾ ಜ್ಯುವೆಲರ್ಸ್‌ನಲ್ಲಿ ಕದ್ದ ಚಿನ್ನ ಮಾರಾಟ ಮಾಡುತ್ತಿದ್ದಳು ಎನ್ನುವುದು ತಿಳಿದುಬಂದಿದೆ.
ಈ ಕುರಿತು ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.






















