ರಾಣಿಬೆನ್ನೂರು: ಹುಚ್ಚು ನಾಯಿ ಕಡಿದು 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ವಿವಿಧ ಭಾಗದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಉಮಾಶಂಕರ ನಗರ, ಹಲಗೇರಿ ಕ್ರಾಸ್‌ನಲ್ಲಿ ನಾಯಿಗಳು ಕಚ್ಚಿವೆ ಎನ್ನಲಾಗಿದೆ. ಉಮಾಶಂಕರ ನಗರದ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ದಾಳಿ ನಡೆಸಿದ ಹುಚ್ಚು ನಾಯಿ ಬಾಲಕನನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ನಂತರ ರಸ್ತೆಯುದ್ದಕ್ಕೂ ನಡೆದಾಡುತ್ತಿದ್ದ ಜನರ ಮೇಲೆ 15 ಜನರಿಗೆ ಕಚ್ಚಿ ಗಾಯಗೊಳಿಸಿದೆ.
ಗಾಯಗೊಂಡ ಎಲ್ಲರನ್ನು ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಜನರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ನಗರಸಭೆ ಸಿಬ್ಬಂದಿ ಹುಚ್ಚು ನಾಯಿಯನ್ನು ಸೆರೆ ಹಿಡಿದಿದ್ದಾರೆ.
ಇತ್ತೀಚಿನ ದಿನದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ನಗರಸಭೆ ವತಿಯಿಂದ ನಾಯಿಗಳನ್ನು ಹಿಡಿದು ಕಸಿ ಮಾಡುವ ಕಾರ್ಯ ನಡೆದಿದ್ದರೂ ಬೀದಿ ನಾಯಿಗಳ ಹಾವಳಿ ತಪ್ಪಿಲ್ಲ.
ಇದೀಗ ಹುಚ್ಚು ನಾಯಿಗಳ ಕಾಟವೂ ಅಧಿಕವಾಗಿದ್ದು ಜನತೆ ಮನೆಯಿಂದ ಹೊರ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






















