ಗದಗದಲ್ಲಿ ಲಂಚ ಪ್ರಕರಣ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ
ಗದಗ: ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುವಾಗ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರಿಗೆ ಸೇರಿರುವ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ.
5 ಲಕ್ಷ ಲಂಚ ಸ್ವೀಕಾರ ವೇಳೆ ದಾಳಿ : ಸಂಕಧಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರ ವಿಜಯ ಪೂಜಾರರಿಂದ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂಬ ಆರೋಪ ಕೇಳಿಬಂದಿತ್ತು. ಒಟ್ಟು 11 ಲಕ್ಷ ರೂಪಾಯಿಗೆ ‘ಡೀಲ್’ ನಡೆದಿದ್ದು, ಅದರ ಭಾಗವಾಗಿ 5 ಲಕ್ಷ ರೂಪಾಯಿ ಸ್ವೀಕರಿಸುವಾಗ ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ನ್ಯಾಯಾಂಗ ಬಂಧನ
ಹಣವನ್ನು ಸ್ವೀಕರಿಸುವ ಕ್ಷಣದಲ್ಲೇ ಅಧಿಕಾರಿಗಳು ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಬಾಲಾಜಿ ಆಸ್ಪತ್ರೆಯಲ್ಲಿ ಕಾರ್ಯಾಚರಣೆ: ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ದಾಳಿ ನಡೆದಿದ್ದು, ಅಲ್ಲಿದ್ದ ದಾಖಲೆಗಳು ಹಾಗೂ ನಗದು ಕುರಿತು ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಮಹಜರ್ ಪ್ರಕ್ರಿಯೆ ಮುಂದುವರಿದಿದೆ.
ಪಿಎಗಳ ವಿಚಾರಣೆ: ಪ್ರಕರಣ ಸಂಬಂಧ ಶಾಸಕರ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಪಿಎ ಗುರು ಲಮಾಣಿ ಅವರನ್ನೂ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಲಂಚದ ಹಣದ ವಹಿವಾಟು, ಪೂರ್ವ ಒಪ್ಪಂದ ಹಾಗೂ ಕಾಮಗಾರಿಯ ಅನುಮೋದನೆ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ರಜನೀ–ಕಮಲ್ ಮಹಾ ಸಂಗಮ: ‘KHxRK’ ಚಿತ್ರಕ್ಕೆ ಐತಿಹಾಸಿಕ ಚಾಲನೆ
ಲೋಕಾಯುಕ್ತ ಅಧಿಕಾರಿಗಳು ಶಾಸಕ ಚಂದ್ರು ಲಮಾಣಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ದಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಹಣದ ಬೇಡಿಕೆಯ ಆಡಿಯೋ/ವೀಡಿಯೋ ಸಾಕ್ಷ್ಯಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.























